ಕುಂದಾಪುರ, ಸೆ 13 (DaijiworldNews/DB): ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನೇತಾರ, ಕೇಂದ್ರ ಸರ್ಕಾರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪ್ರಥಮ ಪುಣ್ಯತಿಥಿಯನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಆಸ್ಕರ್ ಫೆರ್ನಾಂಡಿಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿ, ಆಸ್ಕರ್ ಫೆರ್ನಾಂಡಿ ಅವರ ಸೇವೆ, ಪಕ್ಷಕ್ಕೆ ಅವರು ನೀಡಿದ ಕೊಡುಗೆ, ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಅಳವಡಿಸಿಕೊಂಡ ಮೌಲ್ಯಗಳನ್ನು ಪಾಲಿಸಬೇಕಾಗಿದೆ. ನಾಡಿಗೆ ಅವರು ನೀಡಿದ ಸೇವೆಯನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವಿವಿಧ ಮಜಲುಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನ ರಾಜಕಾರಣಿಯಾಗಿ ಸಾಮಾನ್ಯ ಕಾರ್ಯಕರ್ತನ ಜೊತೆಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದ ಅವರು ಮಾದರಿ ರಾಜಕಾರಣಿಯಾಗಿದ್ದರು. ಅವರ ಆದರ್ಶ, ಆಡಳಿತ ವೈಖರಿ, ಉದಾತ್ತ ಮೌಲ್ಯಗಳನ್ನು ಹೊಂದಿದ್ದ ಅವರು ಧೀಮಂತ ವ್ಯಕ್ತಿಯಾಗಿದ್ದರು. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬಿ. ಹಿರಿಯಣ್ಣ ಚಾತ್ರಬೆಟ್ಟು, ಶ್ಯಾಮಲ ಭಂಡಾರಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಾಕೋಬ್ ಡಿಸೋಜ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಅಲ್ಪಸಂಖ್ಯಾತ ಘಟಕದ ಮುನಾಫ್, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರೆಗಾರ್, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ಆಶ್ಪಕ್ ಕೋಡಿ, ಪ್ರಭಾವತಿ ಶೆಟ್ಟಿ, ಜಾನಕಿ ಬಿಲ್ಲವ, ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ಕೋಣಿ ನಾರಾಯಣ ಆಚಾರ್ ಸ್ವಾಗತಿಸಿದರು. ಸುನಿಲ್ ಪೂಜಾರಿ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ನಿರೂಪಿಸಿದರು.