ಕಡಬ, ಸೆ 13 (DaijiworldNews/HR): ಹತ್ಯೆಗೊಳಗಾಗಿರುವ ಬಿಜೆಪಿ ಜಿಲ್ಲಾ ಯುವಮೋರ್ಚಾದ ಪ್ರವೀಣ್ ನೆಟ್ಟಾರು ಅವರ ಮನೆ ನಿರ್ಮಾಣದ ಕನಸನ್ನು ನನಸು ಮಾಡುವ ಕುರಿತು ಅವರ ಕುಟುಂಬಸ್ಥರ ಜೊತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತುಕತೆ ನಡೆಸಿದ್ದಾರೆ.
ಕಡಬ ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿರುವ ತಮ್ಮ ತಾಯಿ ಮನೆಗೆ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.
ಪ್ರವೀಣ್ ಅವರ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನಾ ಹಾಗೂ ಕುಟುಂಬದ ಇತರ ಪ್ರಮುಖರು ನಳಿನ್ ಅವರ ನಿವಾಸಕ್ಕೆ ಆಗಮಿಸಿದ್ದು, ಈ ವೇಳೆ ಪಕ್ಷ ಹಾಗೂ ಸಂಘ ಪರಿವಾರದ ವತಿಯಿಂದ ಹೊಸ ಮನೆಯನ್ನು ಕಟ್ಟಿಸಿಕೊಂಡುವುದಾಗಿ ನಳಿನ್ ಭರವಸೆ ನೀಡಿದ್ದಾರೆ
ಇನ್ನು ಪ್ರವೀಣ್ ಅವರ ಪತ್ನಿ ನೂತನ ಅವರಿಗೆ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ಕಾಯಂ ಉದ್ಯೋಗ ನೀಡುವುದಾಗಿ 'ಜನಸ್ಪಂದನ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದು, ಈ ಬಗ್ಗೆಯೂ ನಳಿನ್ ಅವರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.