ಉಡುಪಿ, ಸೆ 13 (DaijiworldNews/MS): ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯ ರಸ್ತೆ ಅವ್ಯವಸ್ಥೆ ಯನ್ನು ಖಂಡಿಸಿ ಇಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಇಂದ್ರಾಳಿ ಬ್ರಿಡ್ಜ್ ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ನಿತ್ಯಾನಂದ ಒಳಕಾಡು ರವರು ವಿಶಿಷ್ಟವಾಗಿ ಪ್ರತಿಭಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ನಿತ್ಯಾನಂದ ಒಳಕಾಡು ಅವರು "ಈ ರಸ್ತೆ ಗೆ ಟೆಂಡರ್ ಆಗಿ ಮೂರು ವರ್ಷಗಳಿಂದ ರಸ್ತೆ ಹಾಳಾದರೂ ಯಾರೂ ಪ್ರಶ್ಬೆ ಮಾಡುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ. ಸ್ವತಹ ಮುಖ್ಯಮಂತ್ರಿಗಳೇ ಈ ರಸ್ತೆಯಲ್ಲಿ ಸಂಚಾರ ಮಾಡಿದರೂ ಕೂಡಾ ಅವರ ಕಣ್ಣಿಗೂ ಈ ರಸ್ತೆಯ ಸಮಸ್ಯೆ ಕಂಡು ಬಂದಿಲ್ಲ.
ಇಲ್ಲಿನ ಹೊಂಡ ಗಳನ್ನು ರಿಪೇರಿ ಮಾಡಲು ಸ್ವತಹ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವಾರ್ಯತೆ ಇದೆ. ಉಡುಪಿ ಜನರು ಮುಗ್ದರು, ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಉಡುಪಿಗೆ ಬಂದು ಜನರ ಸಮಸ್ಯೆ ಬಗೆಹರಿಸಲಿ. ಈ ರಸ್ತೆಯಲ್ಲಿ ಬೀದಿ ದೀಪ ಕೂಡಾ ಇಲ್ಲ. ಇದರಿಂದಾಗಿ ದನ ಕರುಗಳು ಸಾಯುತ್ತವೆ. ದನ ಕರುಗಳ ಹೆಸರಿನಲ್ಲಿ ವೋಟ್ ತೆಗೆದುಕೊಳ್ಳುವ ಇವರಿಗೆ ಇದು ಕಾಣುವುದಿಲ್ಲವಾ. ಮೊನ್ನೆ ಮುಖ್ಯಮಂತ್ರಿಯವರು ಬರುವ ಸಂಧರ್ಭದಲ್ಲಿ ಹಾಕಿದ ಡಾಮಾರ್ ಒಂದೇ ದಿನದಲ್ಲಿ ಕಿತ್ತು ಬಂದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದ್ರಾಳಿಯ ಈ ಭಾಗದಲ್ಕಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತಿದ್ದು ದ್ವಿಚಕ್ರ ಮತ್ತು ಇತರ ವಾಹನಗಳು ನಿರಂತರವಾಗಿ ಅಪಘಾತಕ್ಕೀಡಾಗಿ ಜನರು ಸಂಕಷ್ಟ ಅನುಭವಿಸುತಿದ್ದಾರೆ