ಕಾರ್ಕಳ, ಸೆ 13 (DaijiworldNews/MS): ನಗರದ ಮೂರುಮಾರ್ಗ ಎಂಬಲ್ಲಿ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿಯೊಬ್ಬರು ದಾರುಣ ರೀತಿಯಲ್ಲಿ ಮೃತ ಪಟ್ಟ ಘಟನೆಗೆ ಸಂಬಂಧಿಸಿ ಪ್ರಕರಣ ವಿಚಾರಣೆ ನಡೆಸಿದ ಹೆಚ್ಚುವರಿ ಸತ್ರ ನ್ಯಾಯಧೀಶರು ಆರೋಪಿ ರಿಕ್ಷಾ ಚಾಲಕನಾದ ರವಿ ನಿದೋರ್ಷಿ ಎಂದು ತೀರ್ಪು ನೀಡಿದ್ದಾರೆ.
ಘಟನೆಯ ವಿವರ.
2016 ಮಾರ್ಚ್ 06 ರಂದು ಸಂಜೆ 4.30ರಂದು ಈ ಘಟನೆ ನಡೆದಿತ್ತು. ಸದಾಶಿವ ಆಚಾರ್ಯ(೮೦) ಎಂಬವರು ಕಾರ್ಕಳ ನಗರದ ಮೂರುಮಾರ್ಗ ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದಿದ್ದ ರಿಕ್ಷಾವೊಂದು ಡಿಕ್ಕಿ ಹೊಡೆದಿತ್ತು. ತೀವ್ರ ತರಹದ ಗಾಯಗೊಂಡು ಚಿಕಿತ್ಸೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ರಾತ್ರಿ 7.30 ಘಂಟೆಗೆ ಮೃತರಾಗಿರುತ್ತಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪುರಸಭೆಯ ಘನತ್ಯಾಜ್ಯ ಸಾಗಣೆ ಮಾಡುವ ಟ್ರಾಕ್ಟರ್ ಚಾಲಕ ರವಿ ಎನ್ನುವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಅಂದಿನ ಠಾಣಾಧಿಕಾರಿ ಆರೋಪಿಯ ವಿರುದ್ಧ ಕಾರ್ಕಳ ನ್ಯಾಯಾಲಯದಲ್ಲಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ನ್ಯಾಯಿಕ ದಂಡಾಧಿಕಾರಿ ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ಸಾಕ್ಷಿಗಳ ಹೇಳಿಕೆ, ಪುರಾವೆಗಳನ್ನು ಪರಿಶೀಲಿಸಿ ಆರೋಪಿ ತಪ್ಪಿತಸ್ಥನೆಂದು ಶಿಕ್ಷೆಯನ್ನು ಘೋಷಿಸಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್ ಅಪೀಲು ದಾಖಲಿಸಿದ್ದು, ನ್ಯಾಯಧೀಶರು ಆರೋಪಿಯ ವಕೀಲರ ಹಾಗೂ ಸರಕಾರಿ ವಕೀಲರ ವಾದ, ವಿವಾದವನ್ನು ಆಲಿಸಿ ಹೆಚ್ಚುವರಿ ಸತ್ರ ನ್ಯಾಯಾಧೀಶ ದಿನೇಶ್ ಹೆಗ್ದೆಯವರು ಆರೋಪಿಯ ಕ್ರಿಮಿನಲ್ ಅಪೀಲನ್ನು ಪುರಸ್ಕರಿಸಿ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿ ಆರೋಪಿಯನ್ನು ಬಿಡುಗಡೆ ಮಾಡಿರುತ್ತಾರೆ.
ಆರೋಪಿಯ ಪರವಾಗಿ ಕೆ. ಬಾಲಕೃಷ್ಣ ಶೆಟ್ಟಿ ನ್ಯಾಯವಾದಿ ವಾದಿಸಿದ್ದಾರೆ. ಶಬ್ನಮ್ ಖಾನ್ ಹಾಗೂ ಶುಭರಾಜ್.ವಿ ಸಹಕರಿಸಿದ್ದಾರೆ.