ಕುಂದಾಪುರ, ಸೆ 12 (DaijiworldNews/SM): ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮ ನಿ., (ಕೆಯುಐಡಿಎಫ್ಸಿ) ಮೂಲಕ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನಿರಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಜಲಸಿರಿ ಕಾಮಗಾರಿ ಪೂರ್ಣಗೊಂಡಿದೆ. ಈ ಬಗ್ಗೆ ಸೋಮವಾರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಧಿಕಾರಿಗಳು ಈ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಕೆಯುಐಡಿಎಫ್ಸಿಯ ಮಂಜುನಾಥ ಅವರು ಯೋಜನೆ ಪ್ರಗತಿಯ ಬಗ್ಗೆ ಮಾಹಿತಿ ನೀಡಿ, ಒಟ್ಟು 35.50 ಕೋಟಿ ವೆಚ್ಚದ ಯೋಜನೆ ಇದಾಗಿದ್ದು ಲಕ್ಷ್ಮೀ ಸಿವಿಲ್ ಇಂಜಿನಿಯರಿಂಗ್ ಸರ್ವೀಸಸ್ ಪ್ರೈ ಲಿ ಕಂಪೆನಿ ಕಾಮಗಾರಿ ನಡೆಸಿದೆ. 8 ವರ್ಷದ ಅವಧಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಒಳಗೊಂಡ ಕಾಮಗಾರಿ ಇದಾಗಿದೆ. 2022ರ ಜುಲೈಗೆ ಶೇ.100 ಭೌತಿಕ ಕಾಮಗಾರಿ ಮುಗಿದಿದೆ ಎಂದರು.
ಜಪ್ತಿಯ ನೀರಿನ ಶುದ್ಧೀಕರಣ ಘಟಕದ ಮೂಲಕ ಪಟ್ಟಣಕ್ಕೆ ಹಾದು ಬರುವ ಮುಖ್ಯ ಕೊಳವೆ ಮಾರ್ಗದಿಂದ ಸ್ಥಳೀಯ ಗ್ರಾ.ಪಂ.ಗಳಿಗೂ ನೀರಿನ ಸರಬರಾಜು ಮಾಡಲಾಗುತ್ತಿದೆ. 8 ವರ್ಷಗಳ ನಿರ್ವಹಣಾ ಅವಧಿಯಲ್ಲಿ ಗುತ್ತಿಗೆ ಸಂಸ್ಥೆ ಜಾಕ್ವೆಲ್, ನೀರು ಶುದ್ಧೀಕರಣ ಘಟಕ, ನೀರಿನ 5 ಮೇಲ್ಮಟ್ಟದ ಜಲಸಂಗ್ರಹಹಾರಗಳು 127 ಕಿ.ಮೀ ಕೊಳವೆ ಮಾರ್ಗದ ನಿರ್ವಹಣೆಯನ್ನು ನಿರ್ವಹಿಸಲಿದೆ.
ಈಗಾಗಲೇ 2021ರ ಸೆಪ್ಟೆಂಬರ್ನಲ್ಲಿ ಗ್ರಾಹಕರ ಸೇವಾ ಕೇಂದ್ರ ಆರಂಭಿಸಲಾಗಿದ್ದು ಇಲ್ಲಿಯ ವರೆಗೆ 582 ದೂರುಗಳನ್ನು ದಾಖಲಿಸಿಕೊಂಡು 581 ದೂರುಗಳನ್ನು ಸರಿಪಡಿಸಲಾಗಿದೆ. ಒಟ್ಟು ನಳ ಸಂಪರ್ಕಗಳ ಸಂಖ್ಯೆ-4080, ಹಿಂದಿನ ಸಂಪರ್ಕಗಳ ಸಂಖ್ಯೆ 2750, ಹೊಸ ಅಳವಡಿಕೆ 1330 ಆಗಿದೆ. ನೀರಿನ ಸಂಪರ್ಕಗಳು ಹೆಚ್ಚಾಗುತ್ತಿರುವುದರಿಂದ ನೀರಿಗೆ ತೆರಿಗೆ ಪಾವತಿಯಲ್ಲಿ ಹೆಚ್ಚಳವಾಗಿದೆ ಎಂದರು.
ಕನಿಷ್ಠ 7 ಮೀಟರ್ ಎತ್ತರದ ತನಕ ಒತ್ತಡದೊಂದಿಗೆ ನಿರಂತರ ನೀರು ಪೂರೈಕೆಯಾಗುತ್ತಿದೆ. ನೀರು ಪೋಲಾಗುವುದು ಇದರಿಂದ ತಪ್ಪುತ್ತದೆ. ನೀರು ಸೋರುವಿಕೆ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಕುಂದಾಪುರದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಟಾನವಾಗಿರುವುದರಿಂದ ಇದೊಂದು ಮಾದರಿಯಾಗಿ ಬೇರೆ ಬೇರೆ ಪೌರಾಡಳಿತ ಸಂಸ್ಥೆಗಳಿಗೆ ಮಾದರಿಯಾಗಲಿದೆ ಎಂದರು.
ಈಗಾಗಲೇ ಸಂಸ್ಥೆ 10 ಮೀಟರ್ ತನಕ ಉಚಿತವಾಗಿ ಪೈಪ್ಲೈನ್ ಮಾಡಿಕೊಡುತ್ತಿದ್ದು ಉಳಿಕೆ ದೂರವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನಿವಾಸಿಗಳು ಅಳವಡಿಕೆ ಮಾಡಿಕೊಂಡಲ್ಲಿ ಸದಾ ಶುದ್ಧ ಕುಡಿಯುವ ನೀರು ದೊರೆಯುತ್ತದೆ. ಮೀಟರ್ ಅಳವಡಿಕೆ ಮಾಡಿರುವುದರಿಂದ ಬಳಸಿದ ನೀರಿಗೆ ಮಾತ್ರ ಶುಲ್ಕ ಪಾವತಿಸಬಹುದಾಗಿದೆ ಎಂದರು.