ಕುಂದಾಪುರ, ಫೆ 8(MSP): ಸಿಂಗಾಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೋರ್ವರು ಕುಂದಾಪುರದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಸರ್ವೀಸ್ ರಸ್ತೆಯಲ್ಲಿ ಭಾಷಾ ಟ್ರಾನ್ಸ್ಫೋರ್ಟ್ ಸಮೀಪ ಗುರುವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಲಾರಿಯಡಿಗೆ ಸಿಲುಕಿ ದಾರುಣವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ದೈವಿಯನ್ನು ಕುಂದಾಪುರದ ಮಾರ್ಕೋಡು ನಿವಾಸಿ ಶಂಕರನಾರಾಯಣ ಎಂಬುವರ ಪುತ್ರ ವಿವೇಕಾನಂದ ಎಸ್.ಕೆ(42) ಎಂದು ಗುರುತಿಸಲಾಗಿದೆ.
ವಿವೇಕಾನಂದ ತನ್ನ ತಮ್ಮನ ಜೊತೆಗೆ ಹಲವು ವರ್ಷಗಳಿಂದ ಸಿಂಗಾಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ವಿವಾಹಿತರಾಗಿದ್ದ ಅವರಿಗೆ ಹೆಣ್ಣು ಮಗುವಿದ್ದು, ಆಕೆಯ ನಾಮಕರಣಕ್ಕೆಂದು ರಜೆಯಲ್ಲಿ ಬುಧವಾರ ಸಂಜೆ ಊರಿಗೆ ಬಂದಿದ್ದರು. ಪೆಬ್ರುವರಿ 9 ರಂದು ಆಕೆಯ ನಾಮಕರಣ ನಡೆಯುವುದಿತ್ತು.
ಗುರುವಾರ ಸಂಜೆ ನಾಮಕರಣಕ್ಕೆ ಸಾಮಗ್ರಿ ಖರೀದಿಸಲೆಂದು ಕುಂದಾಪುರಕ್ಕೆ ಬಂದಿದ್ದ ಅವರು ರಾತ್ರಿ 8.15ರ ಸುಮಾರಿಗೆ ವಾಪಾಸು ಮನೆ ಕಡೆಗೆ ತನ್ನ ಹೋಂಡಾ ಆಕ್ಟಿವಾ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ಹೆದ್ದಾರಿ ಅಗಲೀಕರಣದ ಕಾರಣಕ್ಕೆ ಎಲ್ಲಾ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಬಿಡಲಾಗಿದ್ದು, ವಿವೇಕಾನಂದ ಬೈಕಿನಲ್ಲಿ ಸರ್ವೀಸ್ ರಸ್ತೆ ಕೋಟೇಶ್ವರದ ಕಡೆಗೆ ಪ್ರಯಾಣಿಸುತ್ತಿದ್ದರು. ಇದೇ ಸಂದರ್ಭ ಇನ್ಸುಲೇಟರ್ ಲಾರಿಯೂ ಕುಂದಾಪುರದ ಕಡೆಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದು, ಇಕ್ಕಟ್ಟಾದ ಸರ್ವೀಸ್ ರಸ್ತೆಯಲ್ಲಿ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಾದ ತಕ್ಷಣ ನಿಯಂತ್ರಣ ಕಳೆದುಕೊಂಡ ವಿವೇಕಾನಂದ ರಸ್ತೆಗೆ ಬಿದ್ದಿದ್ದು, ಲಾರಿಯ ಹಿಂಬದಿಯ ಚಕ್ರ ಅವರ ತಲೆಯ ಮೇಲೆ ಹಾದುಹೋಗಿದೆ. ವಿವೇಕಾನಂದ ತಲೆಗೆ ಹೆಲ್ಮೆಟ್ ಧರಿಸಿದ್ದರೂ ಹೆಲ್ಮೆಟ್ ಪುಡಿಪುಡಿಯಾಗಿದ್ದು ಅವರ ತಲೆ ಅಪ್ಪಚ್ಚಿಯಾಗಿದೆ. ಗಂಭೀರಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕುಂದಾಪುರ ಸಂಚಾರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಅದರ ಚಾಲಕನನ್ನು ಪೊಲಿಸರು ಬಂಧಿಸಿದ್ದಾರೆ.