ಮಂಗಳೂರು, ಸೆ 12 (DaijiworldNews/HR): ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಸೆ.11ರ ಭಾನುವಾರ ತಡರಾತ್ರಿ ಸಂಭವಿಸಿದ ಐದು ವಾಹನಗಳ ಸರಣಿ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರು ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಮುಂದಾದಾಗ ಏಕಾಏಕಿ ಎಡಕ್ಕೆ ಹೋಗಿದ್ದು, ಹಿಂಬದಿಯಿಂದ ಬರುತ್ತಿದ್ದ ಮಹಿಳೆ ಮತ್ತು ಮಕ್ಕಳಿದ್ದ ಹುಂಡೈ ಕಾರು ಇನ್ನೋವಾಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಡನ್ ಬ್ರೇಕ್ ಹಾಕಿದೆ. ಇದೇ ವೇಳೆ ಕಾರು ಸಂಪೂರ್ಣ ಯು-ಟರ್ನ್ ಮಾಡಿ ಚಲಿಸುತ್ತಿದ್ದ ಸ್ಕೂಟರ್ ಹಾಗೂ ರಸ್ತೆ ಪಕ್ಕ ನಿಂತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.
ಸ್ಕೂಟರ್ ಸವಾರ ಕಾಸರಗೋಡು ನಿವಾಸಿ ತರುಣ್ ಗಾಯಗೊಂಡಿದ್ದು, ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಹ್ಯುಂಡೈ ಕಾರು ಚಲಾಯಿಸುತ್ತಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಅಮೃತ್ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳಿಗೂ ಗಾಯಗಳಾಗಿವೆ.
ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು ಸ್ಥಳದಿಂದ ಪರಾರಿಯಾಗಿದೆ. ಇನ್ನೋವಾ ಅತಿವೇಗದ ಚಾಲನೆ ಹಾಗೂ ವಿದ್ಯಾರ್ಥಿಗಳಿದ್ದ ಕಾರು ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.