ಮಂಗಳೂರು, ಫೆ 07(SM): ಮೀನು ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ತಲುಪಿಸಲು ಮುಂಬೈನಿಂದ ತಂದಿದ್ದ 5 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣಾ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರಿಗೆ ಮೀನಿನ ವ್ಯಾಪಾರಕ್ಕಾಗಿ ಬಂದಿದ್ದ ಮಹಾರಾಷ್ಟ್ರದ ರತ್ನಾಗಿರಿ ಮೂಲದವರಾದ ಅಸೀಫ್ ಮಹಮ್ಮದ್ ನಕ್ವಾ ಅವರ ಬಳಿಯಿದ್ದ 5 ಲಕ್ಷ ರೂಪಾಯಿ ಹಣವಿರುವ ಬ್ಯಾಗನ್ನು ಬಿಳಿ ಬಣ್ಣದ ಟವೇರಾ ಕಾರಿನಲ್ಲಿ ಬಂದಿದ್ದ 7 ಜನರ ತಂಡ ಫೆಬ್ರವರಿ 6ರಂದು ದರೋಡೆ ಮಾಡಿಕೊಂಡು ಪರಾರಿಯಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳ ಸುಳಿವನ್ನು ಪತ್ತೆ ಹಚ್ಚಿದ್ದು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಟ್ಕಳ ಮೂಲದ ಮಹಮ್ಮದ್ ಸಬೀರ್, ಮಹಮ್ಮದ್ ನವೀದ್, ಖ್ವಾಜಾ ಸಾಬ್, ಮಹಮ್ಮದ್ ನಬೀಲ್ ಸಾಬ್, ಸಯ್ಯದ್ ಹುಸೇನ್, ಸಯ್ಯದ್ ಫಯಾಜ್ ಹಾಗೂ ನಾಸೀರ್ ಶೇಕ್ ಬಂಧಿತ ಆರೋಪಿಗಳು. ಇನ್ನು ಆರೋಪಿಗಳು ಕೃತ್ಯಕ್ಕೆ ಬಳಸಿದ ಟವೇರಾ ಕಾರು, 5 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಉಪ ಪೊಲೀಸ್ ಆಯುಕ್ತ ಹನುಮಂತರಾಯ, ಉಪ ಪೊಲೀಸ್ ಆಯುಕ್ತ ಉಮಾ ಪ್ರಶಾಂತ್, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅಶೋಕ ಪಿ, ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್, ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಜಾನಕಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.