Karavali
ಮಂಗಳೂರು: ಸುವರ್ಣ ಸಂಭ್ರಮದಲ್ಲಿ ತುಳುನಾಡಿನ ಮನೆ ಮಾತಾಗಿರುವ ಪ್ರೈವೆಟ್ ಚಾಲೆಂಜ್ ಸೀಸನ್-2 ಕಾರ್ಯಕ್ರಮ
- Sun, Sep 11 2022 10:13:18 AM
-
ಮಂಗಳೂರು, ಸೆ 11 (DaijiworldNews/DB): ಪ್ರೈವೆಟ್ ಚಾಲೆಂಜ್ ಎನ್ನುವ ಪದ ಕರಾವಳಿಯಲ್ಲಿ ಕೇಳದವರಿಲ್ಲ. ಕಾರ್ಯಕ್ರಮ ವೀಕ್ಷಿಸದೇ ಇರುವವರೂ ಸಿಗೋದು ಅಪರೂಪ. ಅದೆಷ್ಟೋ ಮಂದಿಗೆ ರವಿವಾರ ರಾತ್ರಿ ಪ್ರೈವೆಟ್ ಚಾಲೆಂಜ್ ಕಾರ್ಯಕ್ರಮ ವೀಕ್ಷಿಸದೆ ನಿದ್ದೆಯೂ ಬರುವುದಿಲ್ಲ. ಅದೇನೇ ಕೆಲಸ ಕಾರ್ಯಗಳಿದ್ದರೂ ಪ್ರೈವೆಟ್ ಚಾಲೆಂಜ್ ಕಾರ್ಯಕ್ರಮವನ್ನು ವೀಕ್ಷಿಸುವವರು ಕೆಲವರಾದರೆ, ಮತ್ತೆ ಮತ್ತೆ ನೋಡುವವರು ಅನೇಕರು.
ಹೌದು 'ತುಳುನಾಡ ಮಾಣಿಕ್ಯ' ಅರವಿಂದ ಬೋಳಾರ್ ಮತ್ತು ದಾಯ್ಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಒಳಗೊಂಡ ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಪ್ರೈವೆಟ್ ಚಾಲೆಂಜ್ ಸೀಸನ್-2 ಕಾರ್ಯಕ್ರಮ ಐವತ್ತು ಸಂಚಿಕೆಗಳ ಹೊಸ್ತಿಲಲ್ಲಿದೆ. ಇದೇ ಭಾನುವಾರ ಸೆಪ್ಟೆಂಬರ್ 11ರಂದು ಐವತ್ತನೇ ಸಂಚಿಕೆ ವಿಶಿಷ್ಟ ರೀತಿಯಲ್ಲಿ ಪ್ರಸಾರ ಮಾಡಲು ಸಿದ್ಧತೆ ನಡೆಸಿಕೊಳ್ಳಲಾಗಿದೆ.
ಕರಾವಳಿ ಕರ್ನಾಟಕದ ಕಿರುತೆರೆ ಪ್ರೇಕ್ಷಕರಲ್ಲಿ ಹಾಸ್ಯದ ಹೊಸ ಟ್ರೆಂಡ್ ಸೃಷ್ಟಿಸಿದ್ದ ಈ ಕಾರ್ಯಕ್ರಮವನ್ನು ವಿಶ್ವಾದ್ಯಂತ ತುಳುವರು ಯೂಟ್ಯೂಬ್, ಫೇಸ್ ಬುಕ್ ಮತ್ತು ಲೋಕಲ್ ವುಡ್ ಒಟಿಟಿ ವೇದಿಕೆಯಲ್ಲಿ ವೀಕ್ಷಿಸುತ್ತಿದ್ದಾರೆ. ಒಂದಕ್ಕಿಂತ ಮತ್ತೊಂದು ವಿಭಿನ್ನ, ವಿಶಿಷ್ಟ ಹಾಸ್ಯವನ್ನೊಳಗೊಂಡ ವಿಷಯದೊಂದಿಗೆ ಪ್ರೈವೆಟ್ ಚಾಲೆಂಜ್ ವೀಕ್ಷಕರಿಗೆ ಮನೋರಂಜನೆ ನೀಡುತ್ತಿದೆ.
ಈ ಕಾರ್ಯಕ್ರಮದ ಮುಖ್ಯ ಭೂಮಿಕೆಯಲ್ಲಿ ಕಂಡು ಬರುವ ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಹಾಗೂ ದಾಯ್ಜಿವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ತುಳುನಾಡಿನ ಪ್ರತಿಯೊಬ್ಬರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಜೋಡಿ ತನ್ನದೇ ಆದ ಅಭಿಮಾನಿ ಬಳಗವನ್ನು ಕೂಡ ಹೊಂದಿದೆ. ಯಾವುದೇ ವೇಷ ಭೂಷಣಕ್ಕೆ ಈ ಜೋಡಿ ಸೈ ಎನಿಸುತ್ತದೆ.
"ಪ್ರದರ್ಶನವು ಈ ಮಟ್ಟಕ್ಕೆ ತಲುಪುತ್ತದೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. 2020 ರ ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ನ ಅತ್ಯಂತ ಕಷ್ಟಕರ ಸಮಯದಲ್ಲಿ ನಮ್ಮ ಪ್ರೇಕ್ಷಕರನ್ನು ರಂಜಿಸಲು ನಾವು ಬಯಸಿದ್ದೆವು. ಅದೇ ಕಾರಣದಿಂದ ಕಾರ್ಯಕ್ರಮ ಆರಂಭಿಸಿ ಬೋಳಾರ್ ಪಾತ್ರದಲ್ಲಿ ಸುಮಾರು 10-15 ಸಂಚಿಕೆಗಳನ್ನು ತಲುಪುವುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ ವಾರದಿಂದ ವಾರಕ್ಕೆ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿತು. ವೀಕ್ಷಕರ ನಿರೀಕ್ಷೆ ದೊಡ್ಡದಿತ್ತು. ಆದರೆ ನಮ್ಮ ಪ್ರೇಕ್ಷಕರನ್ನು ಎಂದಿಗೂ ನಿರಾಸೆಗೊಳಿಸದ ಅರವಿಂದ ಬೋಳಾರ್ ಅವರಿಗೆ ಒಂದು ದೊಡ್ಡ ಸೆಲ್ಯೂಟ್. ಅವರು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಪ್ರತಿಯೊಂದು ಪಾತ್ರದಲ್ಲೂ ಅವರು ಮಿಂಚಿದರು. ನಿಜವಾಗಿಯೂ, ಕಾರ್ಯಕ್ರಮವು ಹೊಸ ಸಂಚಲನವನ್ನು ಸೃಷ್ಟಿಸಿತು. ಇದು ಸಂಪೂರ್ಣವಾಗಿ ಹೊಸ ಪರಿಕಲ್ಪನೆಯಾಗಿದೆ. ವಿಶೇಷವೆಂದರೆ ಯಾವುದೇ ಇತರ ಕಾರ್ಯಕ್ರಮಗಳ ನಕಲು ಮಾಡದೆ ತಮ್ಮದೇ ಯೋಚನೆಯಿಂದ ಆರಂಭಗೊಂಡು ಭಿನ್ನ ಪರಿಕಲ್ಪನೆಯಾಗಿದೆ" ಎಂದು ತಮ್ಮ ಹಿಂದಿನ ಆಂಕರ್ ಪಾತ್ರಗಳಿಂದ ನಟನಾಗಿ ಬದಲಾದ ವಾಲ್ಟರ್ ನಂದಳಿಕೆಯವರ ಅಂತರಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
80ಕ್ಕೂ ಹೆಚ್ಚು ತುಳು, ಕನ್ನಡ, ಮಲಯಾಳಂ ಮತ್ತು ಕೊಂಕಣಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಖ್ಯಾತ ಹಾಸ್ಯನಟ ಅರವಿಂದ್ ಬೋಳಾರ್ ಅವರು ಜಾಗತಿಕ ಪ್ರೇಕ್ಷಕ ಬಳಗವನ್ನೇ ಹೊಂದಿದ್ದಾರೆ. "ನನ್ನ ಮುಖ ಮತ್ತು ಪಾತ್ರಗಳು ತುಳು ಪ್ರೇಕ್ಷಕರಿಗೆ ಪರಿಚಿತವಾಗಿವೆ, ಆದರೆ 'ಪ್ರೈವೆಟ್ ಚಾಲೆಂಜ್' ನನಗೆ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡಿತು, ವಿಶೇಷವಾಗಿ ವಿದೇಶಗಳಲ್ಲಿರುವವರ ಮನ ಗೆಲ್ಲಲು ಸಾಧ್ಯವಾಯಿತು. ಇದುವರೆಗೆ 110ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದು ನನಗೆ ಅಪಾರ ತೃಪ್ತಿ ಇದ್ದು, ತುಳು ಭಾಷೆಯಲ್ಲಿ ಹೊಸ ದಾಖಲೆಯಾಗಿದೆ ಎನ್ನುತ್ತಾರೆ ಕಾರ್ಯಕ್ರಮದ ಜನ ಮೆಚ್ಚಿದ ನಾಯಕ ಅರವಿಂದಣ್ಣ.
ಮೊದಲ ಸೀಸನ್ ಬಹುಪಾಲು ಮನೆಯೊಳಗಿನ ಅಥವಾ ಸ್ಟುಡಿಯೋ ಸೆಟ್-ಅಪ್ ಕಾರ್ಯಕ್ರಮವಾಗಿದ್ದವು. ಅಲ್ಲಿ ವಾಲ್ಟರ್ ನಂದಳಿಕೆ ತಮಾಷೆಯ ಪ್ರಶ್ನೆಗಳೊಂದಿಗೆ ಟಿವಿ ನಿರೂಪಕನಾಗಿ ಕಾಣಿಸಿಕೊಂಡಿದ್ದರು. ಬೋಳಾರ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅವರು ಮೊದಲ ಸೀಸನ್ನ 60 ಸಂಚಿಕೆಗಳಲ್ಲಿ 62 ಪಾತ್ರಗಳನ್ನು ನಿರ್ವಹಿಸಿದರು. ಇದು ಹೇಗೆ ಸಾಧ್ಯ ಎನ್ನುವ ಕುತೂಹಲ ಮೂಡಬಹುದು. ಎರಡು ಸಂಚಿಕೆಗಳಲ್ಲಿ ಬೋಳಾರ್ ಒಬ್ಬರೇ ಎರಡೆರಡು ಪಾತ್ರಗಳನ್ನು(ಡಬಲ್ ಆಕ್ಟಿಂಗ್) ನಿರ್ವಹಿಸುವ ಮೂಲಕ ತುಳು ಟಿವಿ ಶೋನಲ್ಲಿ ಹೊಸ ಕಾಂತ್ರಿಯುನ್ನು ಮಾಡಿದರು.
ನಿರ್ವಿಘ್ನವಾಗಿ ಕಾರ್ಯಕ್ರಮ ಸಾಗುತ್ತಿದ್ದಾಗ, 2020ರ ಆಗಸ್ಟ್ ತಿಂಗಳಲ್ಲಿ ಒಂದು ಸಂದಿಗ್ದ ಪರಿಸ್ಥಿತಿ ಎದುರಾಯಿತು. ವಾಲ್ಟರ್ ನಂದಳಿಕೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ, ಕಾರ್ಯಕ್ರಮವನ್ನು ಹೇಗೆ ಮುಂದುವರೆಸುವುದು, ವೀಕ್ಷಕರಿಗೆ ಮನೋರಂಜನೆ ನೀಡುವುದು ಹೇಗೆ ಎನ್ನುವ ಪ್ರಶ್ನೆ ಕಾಡಲಾರಂಭಿಸಿತು. ಈ ವೇಳೆಯಲ್ಲಿ ಹೊಳೆದ ಯೋಚನೆಯೇ ಬೋಳಾರ್ ಅವರನ್ನೇ ದ್ವಿಪಾತ್ರದಲ್ಲಿ ತೋರಿಸುವುದು ಎನ್ನುವ ಮಾತುಗಳು ಕಾರ್ಯಕ್ರಮ ನಿರ್ದೇಶಕ ಹಾಗೂ ದಾಯ್ಜಿವರ್ಲ್ಡ್ನ ಕಾರ್ಯಕ್ರಮ ನಿರ್ದೇಶಕ ಸ್ಟ್ಯಾನಿ ಬೇಳಾ ಅವರದು.
"ಪ್ರತಿ ವಾರ ಹೊಸ ಆಲೋಚನೆಗಳನ್ನು ತರುವುದು ಒಂದು ಸವಾಲಾಗಿದೆ. ಕೆಲವೊಮ್ಮೆ, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಹಿನ್ನೆಲೆಯಲ್ಲಿ ಇತರ ಸಹ ನಟರನ್ನು ಬಳಸಿಕೊಂಡಿದ್ದೇವೆ. ಅದು ಕೂಡ ಚೆನ್ನಾಗಿ ಕೆಲಸ ನಿರ್ವಹಿಸಿದೆ. ಎರಡನೇ ಸೀಸನ್ನಲ್ಲಿ ಕೆಲವು ಸಂಚಿಕೆಗಳು ದುಬೈ ಫ್ಲೈಟ್ ಶೋನಂತಹ ಶೋಗಳು ಬೃಹತ್ ಹಿಟ್ ಆಗಿವೆ. ಯೂಟ್ಯೂಬ್ನಲ್ಲಿ ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ದಾಟಿದೆ. ಆಭರಣ ಶಾಪಿಂಗ್, ಐಸ್ಕ್ರೀಂ ಪಾರ್ಲರ್, ಹೊಸ ಕಾರು ಖರೀದಿ, ಪೋಷಕ-ಶಿಕ್ಷಕರ ಸಭೆ, ಮೀನು ಮಾರುವ ಮಹಿಳೆ ಇತ್ಯಾದಿಗಳು ಕೂಡ ವೀಕ್ಷಕರ ಮನ ಗೆಲ್ಲುವಲ್ಲಿ ಸಾಧ್ಯವಾಗಿವೆ” ಎನ್ನುವುದು ದಾಯ್ಜಿವರ್ಲ್ಡ್ ಟಿವಿಗಾಗಿ ಕೊಂಕಣಿ ಮತ್ತು ತುಳು ಭಾಷೆಯ ಧಾರಾವಾಹಿ ನಿರ್ದೇಶಕ ಸ್ಟ್ಯಾನಿ ಬೇಳಾ ಅವರ ಅಭಿಪ್ರಾಯ.
ಜನಪ್ರಿಯ ವಿದ್ಯುತ್ ದೀಪಗಳ ಉಪಕರಣಗಳ ಮಳಿಗೆ ಎಲೆಕ್ಟ್ರಿಕಲ್ ಪಾಯಿಂಟ್ ಎರಡೂ ಋತುಗಳಲ್ಲಿ ಪ್ರಸಾರಗೊಂಡ ಎಲ್ಲಾ ಕಾರ್ಯಕ್ರಮಗಳ ಮುಖ್ಯ ಪ್ರಯೋಜಕರಾಗಿದ್ದಾರೆ.
’ಟೀಮ್ ಪ್ರೈವೇಟ್ ಚಾಲೆಂಜ್' ಮೂಲಗಳ ಪ್ರಕಾರ, ಪ್ರದರ್ಶನವು ಎರಡನೇ ಆವೃತ್ತಿಯಲ್ಲಿ ಐವತ್ತು ಸಂಚಿಕೆಗಳನ್ನು ಪೂರ್ಣಗೊಳಿಸಿದ ಬಳಿಕವೂ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
"ಮೊದಲ ಸೀಸನ್ ನನಗೆ ತುಂಬಾ ಸವಾಲಾಗಿರಲಿಲ್ಲ. ಏಕೆಂದರೆ ಕಳೆದ 7 ವರ್ಷಗಳಿಂದ ಆಂಕರ್ ಆಗಿ ನಾನು ಕೆಲಸ ಮಾಡುತ್ತಿದ್ದೆ. ನನ್ನ ಸಂವಹನದಲ್ಲಿ ನಾನು ತಮಾಷೆಯನ್ನು ಬಳಸಿಕೊಳ್ಳಬೇಕಾಗಿತ್ತು. ಆದರೆ, ಸೀಸನ್-ಎರಡರಲ್ಲಿ ನನಗೆ ಅನೇಕ ಹೊಸ ವಿಚಾರಗಳು ತಿಳಿದವು. ಬೋಳಾರ್, ನಿರ್ದೇಶಕ ಸ್ಟ್ಯಾನಿ ಬೇಳಾ ಮತ್ತು ತಂಡದ ಇತರ ಸದಸ್ಯರಿಂದ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ಮತ್ತು ಚಲನಚಿತ್ರಗಳು, ಧಾರಾವಾಹಿಗಳಲ್ಲಿ ಪಾತ್ರಗಳನ್ನು ಅಲಂಕರಿಸುವ ಅವಕಾಶ ಒದಗಿಬಂತು" ಎನ್ನುತ್ತಾರೆ ವಾಲ್ಟರ್ ನಂದಳಿಕೆ.
ಕಾರ್ಯಕ್ರಮದ ಚಿತ್ರೀಕರಣವನ್ನು ಹಿರಿಯ ಕ್ಯಾಮರಾಮೆನ್ ಕಿರಣ್ ಕೇಪು ಅವರು ನಿರ್ವಹಿಸುತ್ತಿದ್ದಾರೆ. ದಯಾನಂದ್ ಕುಕ್ಕಾಜೆ, ಹರೀಶ್ ಮತ್ತು ಜೇಮ್ಸ್ ಕೂಡ ಇವರಿಗೆ ನೆರವಾಗುತ್ತಿದ್ದಾರೆ. ಶ್ರೀಕಾಂತ್ ಸೋಮಯಾಜಿ, ಹಿರಿಯ ವೀಡಿಯೊ ಸಂಪಾದಕರಾಗಿ ಎಡಿಟಿಂಗ್ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕಾರ್ಯಕ್ರಮದ ಕೆಲವು ಸಂಚಿಕೆಗಳನ್ನು ಕರಾವಳಿ ಪ್ರದೇಶದ ಹೊರಗೆ ಚಿತ್ರೀಕರಿಸಲಾಗಿದೆ. ಸೀಸನ್ 2ರ 40ನೇ ಸಂಚಿಕೆಯನ್ನು ಚಿಕ್ಕಮಗಳೂರಿನ ರೆಸಾರ್ಟ್ ಮತ್ತು ಕಾಫಿ ಎಸ್ಟೇಟ್ನಲ್ಲಿ ಚಿತ್ರೀಕರಿಸಲಾಗಿದೆ. ಬ್ಯಾಂಕಾಕ್ ಥೈಲ್ಯಾಂಡ್, ದುಬೈ ಮತ್ತು ಯುಎಇಯಲ್ಲಿ ಒಂದೊಂದು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ.
ಒಟ್ಟಿನಲ್ಲಿ ಕರಾವಳಿಯಲ್ಲಿ ಜನ ಮೆಚ್ಚಿದ ಪ್ರೈವೆಟ್ ಚಾಲೆಂಜ್ ಸೀಸನ್ -2 ಇದೀಗ ಸುವರ್ಣ ಸಂಭ್ರಮದಲ್ಲಿದ್ದು, ಹೊಸ ವಿಷಯದೊಂದಿಗೆ ವೀಕ್ಷಕರ ಮುಂದೆ ಬರಲು ಅರವಿಂದಣ್ಣ ಹಾಗೂ ವಾಲ್ಟರ್ ತುದಿಗಾಲಲ್ಲಿದ್ದಾರೆ. ಇತ್ತ ಪ್ರೇಕ್ಷಕರೂ ಕೂಡ ತಮ್ಮ ನೆಚ್ಚಿನ ನಟರ ಮತ್ತೊಂದು ಅವತಾರಕ್ಕಾಗಿ ಕಾತರದಲ್ಲಿದ್ದಾರೆ.