ಉಡುಪಿ, ಸೆ 11 (DaijiworldNews/DB): ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಿಂದ ತಪ್ಪಿಸಿಕೊಂಡು ಬಂದಿದ್ದ ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಯ ವೈದ್ಯರ ತಂಡ ಬಲವಂತದಿಂದ ಕಾರಿನಲ್ಲಿ ಕುಳ್ಳಿರಿಸಿ ಕರೆದೊಯ್ದದನ್ನು ಅಪಹರಣವೆಂದು ತಪ್ಪಾಗಿ ತಿಳಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ಉಡುಪಿಯಲ್ಲಿ ಶನಿವಾರ ನಡೆದಿದೆ. ಮಂಗಳೂರಿನ ಕೂಳೂರಿನಲ್ಲಿ ಕಾರನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ನಿಜಾಂಶ ತಿಳಿದು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೋವಾ ಕಾರಿನಲ್ಲಿ ಬಂದಿದ್ದ ವೈದ್ಯರ ತಂಡವು ಉಡುಪಿ ಶ್ರೀಕೃಷ್ಣ ಮಠ ಸಮೀಪದಿಂದ ವ್ಯಕ್ತಿಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದರು. ಇದನ್ನು ನೋಡಿದ ಸ್ಥಳೀಯರು ವ್ಯಕ್ತಿಯನ್ನು ಅಪಹರಿಸಲಾಗಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಕೂಡಲೇ ಉಡುಪಿ ನಗರ ಪೊಲೀಸರು ವಿವಿಧ ಠಾಣೆಗಳಿಗೆ ವಿಷಯ ಮುಟ್ಟಿಸಿದರು. ವಾಹನ ಕಲ್ಸಂಕ ಮಾರ್ಗವಾಗಿ ಕರಾವಳಿ ಬೈಪಾಸ್ ತಲುಪಿರುವ, ಅಲ್ಲಿಂದ ಹೆಜಮಾಡಿ ಟೋಲ್ ಗೇಟ್ ದಾಟಿ ಹೋಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಮಂಗಳೂರು ಪೊಲೀಸರಿಗೂ ವಿಷಯ ಮುಟ್ಟಿಸಿದರು. ಮಂಗಳೂರು ಪೊಲೀಸರು ಕೂಳೂರು ಸಮೀಪ ವಾಹನವನ್ನು ತಡೆದು ನಿಲ್ಲಿಸಿ ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡರು. ಆನಂತರ ವಿಚಾರಣೆ ನಡೆಸಿದಾಗ ನಿಜಾಂಶ ತಿಳಿದು ಪೊಲೀಸರೇ ಆಶ್ಚರ್ಯಚಕಿತರಾದರು.
ಯೋಗೀಶ್ ಭಟ್ (54) ಎಂಬ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದು, ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಿಂದ ತಪ್ಪಿಸಿಕೊಂಡು ಬಂದು ಉಡುಪಿಯಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದರು. ಅಲ್ಲಿಯೂ ಆತನ ಉಪಟಳ ಹೆಚ್ಚಾಗಿದ್ದರಿಂದ ಮನೆಯವರೇ ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ವೈದ್ಯರ ತಂಡ ಉಡುಪಿಗೆ ಬಂದಿದ್ದು, ಕೃಷ್ಣ ಮಠದತ್ತ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ ಕನಕದಾಸ ರಸ್ತೆಯಲ್ಲಿ ಅವರನ್ನು ಪತ್ತೆಹಚ್ಚಿ ಕಾರಿನೊಳಗೆ ಕೂರಿಸಿಕೊಂಡಿದ್ದರು. ನಿಜಾಂಶ ಗೊತ್ತಾದ ಬಳಿಕ ಕಾರನ್ನು ಬೆಂಗಳೂರಿಗೆ ತೆರಳಲು ಪೊಲೀಸರು ಅನುಮತಿ ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೆ ಜಿಲ್ಲೆಯಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಲು ಕಾರಣವಾಯಿತು.