ಬೆಳ್ಳಾರೆ, ಸೆ 10 (DaijiworldNews/SM): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಇದೀಗ ಮತ್ತೆ ಬೆಳ್ಳಾರೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣದ ಲಕ್ಷಣಗಳು ಗೋಚರಿಸಲಾರಂಭಿಸಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನ ಸಹೋದರ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಬೆಳ್ಳಾರೆ ಠಾಣೆ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ ಘಟನೆ ಸೆ 10 ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮುರೈ ಕಾಂಪ್ಲೆಕ್ಸ್ ನ ಮ್ಯಾನೇಜರ್ ಪ್ರಶಾಂತ್ ರೈಯವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಶಫೀಕ್ ತಮ್ಮ ಸಫ್ರಿದ್ ಜೀವ ಬೆದರಿಕೆ ಒಡ್ಡಿರುವುದಾಗಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಈತ ದಿ. ಪ್ರವೀಣ್ ನೆಟ್ಟಾರ್ ಅವರ ಕೋಳಿ ಫಾರ್ಮ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಎಂಬವರ ಪುತ್ರ.
ಇಂದು ಸಂಜೆ ಪ್ರಶಾಂತ್ ರೈಯವರಿಗೆ ಕರೆ ಮಾಡಿರುವ ಸಫ್ರಿದ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಸಗಿ , ಕೊಲ್ಲುವುದಾಗಿ ಬೆದರಿಸಿರುವುದಾಗಿಯೂ ಆರೋಪಿಸಲಾಗಿದೆ.
ಈ ಬಗ್ಗೆ ಪ್ರಶಾಂತ್ ಅವರು ದೂರು ನೀಡಲು ಠಾಣೆಗೆ ತೆರಳಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ನೂರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿದ್ದಾರೆ. ಸಫ್ರೀದ್ ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.