ಬಂಟ್ವಾಳ, ಸೆ 10 (DaijiworldNews/DB): ಆಶಾಕಿರಣ ಇಸ್ರೇಲ್ ಫ್ರೆಂಡ್ಸ್ ಗ್ರೂಪ್ನ ವತಿಯಿಂದ ತಾಲೂಕಿನ ಮೂರು ಬಡ ಕುಟುಂಬಗಳಿಗೆ ನೀಡಿದ ಆರ್ಥಿಕ ನೆರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸಕರ ಕಚೇರಿಯಲ್ಲಿ ಹಸ್ತಾಂತರಿಸಿದರು.
ಬೆನ್ನು ನೋವಿನಿಂದ ಬಳಲುತ್ತಿರುವ ಸಜೀಪ ಮುನ್ನೂರು ಗ್ರಾಮದ ದಳಂದಿಲ ಕೃಷ್ಣ ಪೂಜಾರಿ, ಕ್ಯಾನ್ಸರ್ನಿಂದ ಸಾವನ್ನಪ್ಪಿದ ನರಿಕೊಂಬು ಗ್ರಾಮದ ಶಂಭೂರು ಕೊಪ್ಪಳ ನಿವಾಸಿ ಶೇಖರ ಅವರ ಪತ್ನಿ ವಾರಿಜ, ವೀರಕಂಭ ಗ್ರಾಮದ ಕಂಪದಬೈಲು ನಿವಾಸಿ ಮಮತಾ ಅವರ ಪುತ್ರಿ ವಿಕಲಚೇತನ ಬಾಲಕಿ ಮಹಾಲಕ್ಷ್ಮಿ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಇಸ್ರೇಲ್ ದೇಶದಲ್ಲಿ ದುಡಿಯುವ ಕರಾವಳಿಯ ಕನ್ನಡಿಗರ "ಆಶಾಕಿರಣ ಇಸ್ರೇಲ್ " ಗ್ರೂಪ್ ಮೂಲಕ ತವರೂರ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದೆ. "ಆಶಾಕಿರಣ ಇಸ್ರೇಲ್" ಇಸ್ರೇಲ್ ಫ್ರೆಂಡ್ಸ್ ಹೆಲ್ಪಿಂಗ್ ಗ್ರೂಪ್ ಎಂಬ ಸಂಸ್ಥೆಯ ಮೂಲಕ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಆಯ್ದ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 50 ಸಾವಿರ ರೂ. ಗಳನ್ನು ಹಂಚಿಕೆ ಮಾಡುತ್ತಿದೆ.
ದಿನಕರ್ ಪುತ್ರನ್ ಎಂಬ ಕನ್ನಡಿಗ ಇಸ್ರೇಲ್ ದೇಶದಲ್ಲಿ ದುಡಿಯುವ ಒಂದಷ್ಟು ಯುವಕರನ್ನು ಒಂದುಗೂಡಿಸಿ ಆ ಮೂಲಕ ಆಶಾಕಿರಣ ಗ್ರೂಪ್ ರಚನೆ ಮಾಡಿದ್ದು,ಈ ಗ್ರೂಪ್ ಮೂಲಕ ತವರೂರಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಿವಿಧ ರೀತಿಯ ಸಮಸ್ಯೆಗಳಿಗೆ ಸಹಕಾರ ನೀಡುವ ಉದ್ದೇಶ ಹೊಂದಿದ್ದರು.
ಹೊರ ದೇಶದಲ್ಲಿ ದುಡಿದು ಹಣ ಮಾಡುವುದು ಮಾತ್ರ ಉದ್ದೇಶವಾಗದೆ ಸಾಮಾಜಿಕವಾಗಿ ಹಿಂದುಳಿದ ಜನರ ಕಣ್ಣೀರೊರಸುವ ಕೆಲಸ ಮಾಡಬೇಕು, ಅ ಮೂಲಕ ಜನಸೇವೆ ಮಾಡಬೇಕು ಎಂಬ ಮಹದಾಸೆಯಿಂದ 8 ಜನರಿಂದ ಆರಂಭವಾದ ಈ ಗ್ರೂಪ್ ನಲ್ಲಿ ಪ್ರಸ್ತುತ 33 ಸದಸ್ಯರಿದ್ದಾರೆ. 5 ವರ್ಷಗಳ ಹಿಂದೆ ಇಸ್ರೇಲ್ನಲ್ಲಿ ಆರಂಭವಾದ ಗ್ರೂಪ್ ಈವರಗೆ ಒಟ್ಟು 105 ಜನರಿಗೆ ಆರ್ಥಿಕ ನೆರವು ನೀಡಿದೆ.