ಮಂಗಳೂರು, ಫೆ 07(SM): ಅಪ್ರಾಪ್ತೆಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪದಲ್ಲಿ ಮೈಸೂರು ಪೊಲೀಸರಿಂದ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿರುವ ಮಂಗಳೂರು ಮೂಲದ ಧರ್ಮಗುರುಗಳು ನಿರಪರಾಧಿಗಳು. ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಇವರ ಮೇಲೆ ಬಂದಿರುವ ಅಪವಾದವನ್ನು ದೂರ ಮಾಡಬೇಕೆಂದು ನಗರದ ಬಲ್ಮಠದಲ್ಲಿನ ಧರ್ಮಪ್ರಾಂತ್ಯದ ವುಮನ್ ಸೆಂಟರ್ನಲ್ಲಿ ಇಂದು ಸಮುದಾಯದ ಮಂದಿ ಸಭೆ ಸೇರಿ ಒತ್ತಾಯಿಸಿದ್ದಾರೆ.
ಪ್ರಸ್ತುತ ಪೊಲೀಸ್ ಬಂಧನದಲ್ಲಿರುವ ಬಲ್ಮಠದ ಬೆನೆಟ್ ಅಮ್ಮನ್ನಾ, ಜೋಸ್ವಾ ಅಮನ್ನಾ ಮತ್ತು ಸೆಬಾಸ್ಟಿಯನ್ ಅಮನ್ನಾ ಸಚ್ಚಾರಿತ್ಯವುಳ್ಳವರಾಗಿದ್ದಾರೆ. ಅವರು ಇಂತಹ ಯಾವುದೇ ಪ್ರಕರಣಗಳಲ್ಲಿ ಶಾಮೀಲಾಗಿಲ್ಲ. ಆದರೆ ಯಾರೋ ಮಾಡಿದ ಕುಮ್ಮಕ್ಕಿನಿಂದಾಗಿ ಅವರು ಪೊಲೀಸರಿಂದ ಬಂಧನಕ್ಕೊಳಗಾಗುವಂತಾಗಿದ್ದು, ಇದರ ಹಿಂದೆ ಯಾರದೋ ಕೈವಾಡ ಇದೆ ಎಂದು ಸಮುದಾಯದ ಮುಖಂಡರಾದ ವಿಜಯ್ ಹೇಳಿದ್ದಾರೆ.
ಇನ್ನು ಬಂಧನಕ್ಕೊಳಗಾಗಿರುವವರ ಮನೆ ಮಂದಿ ಕೂಡಾ ಅವರು ಅಮಾಯಕರಾಗಿದ್ದು, ಅವರ ಬಿಡುಗಡೆಯಾಗಲು ಸಂಬಂಧಪಟ್ಟವರು ನೆರವು ನೀಡಬೇಕೆಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಇನ್ನು ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುರೇಶ್ ಮತ್ತು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಅವರಿಗೂ ಮನವಿ ನೀಡಲಾಗಿದೆ.