ಕುಂದಾಪುರ, ಸೆ 10 (DaijiworldNews/HR): ಇಂದಿನ ಒತ್ತಡಮಯ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಅತ್ಯವಶ್ಯ. ಮಾನಸಿಕ ಆರೋಗ್ಯಕ್ಕಾಗಿ ಚಿಕಿತ್ಸೆ ಪಡೆಯಲು ಯಾರು ಅಳುಕಬಾರದು. ನಮ್ಮ ಸಮಸ್ಯೆಗಳಿಗೆ ವೈದ್ಯರಲ್ಲಿ ಹೋಗದಿದ್ದರೆ ಪರಿಹಾರ ದೊರಕದು. ಮಾನಸಿಕ ಆರೋಗ್ಯವನ್ನು ಸಮುದಾಯದ ನೆಲೆಯಲ್ಲಿ ವಿಸ್ತರಿಸಲು ನಡೆಯುತ್ತಿರುವ ಸಮ್ಮೇಳನ ಅರ್ಥಪೂರ್ಣ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ನುಡಿದರು.
ಶನಿವಾರ ಇಲ್ಲಿಗೆ ಸಮೀಪದ ಕೋಟೇಶ್ವರದ ಯುವ ಮೆರಿಡಿಯನ್ ಸಭಾಂಗಣದಲ್ಲಿ ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ 32ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಹೆಸರಾಂತ ಮನೋವೈದ್ಯರ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ರಕ್ಷಣೆಗಾಗಿ ನಮ್ಮ ಟ್ರಸ್ಟ್ ವತಿಯಿಂದ ಸಹಕಾರ ನೀಡುತ್ತಿರುವ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಅನೇಕರು ಚಿಕಿತ್ಸೆಗಾಗಿ ಹಣ ಕೇಳುತ್ತಾರೆಯೇ ಹೊರತು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಮಾನಸಿಕ ಆರೋಗ್ಯ ಪಡೆಯಲು ಹಿಂಜರಿಯಲು ಕಾರಣವಾಗಿರುವ ಮೌಢ್ಯತೆ ಸಮಾಜದಿಂದ ತೊಲಗಿಸದ ಹೊರತು ಸಮಸ್ಯೆ ಬಗೆಹರಿಯದು. ಸಮುದಾಯದತ್ತ ಮನೋವೈದ್ಯರ ನೆಲೆಯಲ್ಲಿ ನಡೆಯುತ್ತಿರುವ ಸಮ್ಮೇಳನ ಅರ್ಥಪೂರ್ಣ ಎಂದರು.
ಭಾರತೀಯ ಮನೋವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎನ್.ಎನ್.ರಾಜು ಮಾತನಾಡಿ, ದೇಶದಲ್ಲೇ ಕರ್ನಾಟಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನ ಅಲಂಕರಿಸಿದೆ. ಹೊಸ ಬದಲಾವಣೆಗಳಿಗೆ ವೇಗವಾಗಿ ಹೊಂದಿಕೊಂಡು ಅದಕ್ಕೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದಲ್ಲಿಯೂ ಮುಂದಿದೆ. ಉಡುಪಿ ಜಿಲ್ಲೆಯ ಸಣ್ಣ ಪಟ್ಟಣ ಕುಂದಾಪುರ ಮನೋವೈದ್ಯರ ಅತ್ಯುತ್ತಮ ಸೇವಾ ನೆಲೆಯಾಗಿದೆ. ಡಾ.ಕೆ.ಎಸ್.ಕಾರಂತ ಅವರಂತಹ ಹಿರಿಯ ವೈದ್ಯರ ಸೇವೆ ಕುಂದಾಪುರ ಮಾತ್ರವಲ್ಲ ದೇಶವ್ಯಾಪಿ ಮನೆ ಮಾತಾಗಿದೆ. ಮನೋವೈದ್ಯರ ಸೇವೆ ಮತ್ತು ಕಾಳಜಿ ಕರ್ನಾಟಕದಲ್ಲಿ ಉಚ್ಚ್ರಾಯ್ಯ ಸ್ಥಿತಿಯಲ್ಲಿದೆ ಎಂದು ನುಡಿದರು.
ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಪಿ.ಕಿರಣ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಮನೋವೈದ್ಯಕೀಯ ಸಂಘದ ನಿಯೋಜಿತ ಅಧ್ಯಕ್ಷ ಡಾ.ವಿನಯಕುಮಾರ್, ಭಾರತೀಯ ಮನೋವೈದ್ಯಕೀಯ ಸಂಘದ ದಕ್ಷಿಣ ವಲಯ ಅಧ್ಯಕ್ಷ ಡಾ.ಉದಯಕುಮಾರ್, ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ನಿಯೋಜಿತ ಅಧ್ಯಕ್ಷ ಡಾ.ಎನ್.ಎಂ.ಪಾಟೀಲ್, ಗೌರವ ಕಾರ್ಯದರ್ಶಿ ಡಾ.ಸೋಮಶೇಖರ್ ಬಿಜ್ಜಲ್, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಡಾ.ರವೀಂದ್ರ ಮುನೋಳಿ ಉಪಸ್ಥಿತರಿದ್ದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಪ್ರಕಾಶ್ ತೋಳಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳ ಮನೋವೈದ್ಯರು ಪಾಲ್ಗೊಂಡಿದ್ದು ಸಮುದಾಯ ಮಾನಸಿಕ ಆರೋಗ್ಯ ಕುರಿತಂತೆ ಚರ್ಚೆ, ಸಂವಾದ ನಡೆಯಲಿದೆ. ಸೆ.11ರಂದು ಸಮ್ಮೇಳನದ ಸಮಾರೋಪ ಜರುಗಲಿದೆ.