ಬಂಟ್ವಾಳ, ಸೆ 09 (DaijiworldNews/DB): ಮಕ್ಕಳಿಗೆ ಕಿರಿ ವಯಸ್ಸಿನಲ್ಲಿ ಸಿಗುವ ಸಾಂಸ್ಕೃತಿಕ ಅವಕಾಶಗಳು ಅವರಲ್ಲಿ ಹೊಸ ಬಗೆಯ ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಬಿಂದ್ಯಾ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲೂಕು ಬಾಲಭವನ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡ್ನ ಸ್ತ್ರೀ ಶಕ್ತಿ ಸಭಾಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ದೇಶಭಕ್ತಿಗೀತೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಿತದೃಷ್ಟಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವುದು ಸಂತಸ ತಂದಿದೆ ಎಂದರು.
ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಮಾತನಾಡಿ, ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಅನೇಕ ಸಾಂಸ್ಕೃತಿಕ ಅವಕಾಶಗಳಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಉತ್ತಮ ವಾತಾವರಣ ಸೃಷ್ಡಿಯಾಗಿರುವುದು ಸಮಾಧಾನಕರ ಸಂಗತಿ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಬಿ.ಆರ್.ಸಿ. ಸುರೇಖಾ, ಕೃಷ್ಣಾಚಾರ್ಯ, ಎಸಿಡಿಪಿಓ ಶೀಲಾವತಿ ಉಪಸ್ಥಿತರಿದ್ದರು. ಬಂಟ್ವಾಳ ಸಿಡಿಪಿಓ ಗಾಯತ್ರಿ ಕಂಬಳಿ ಪ್ರಸ್ತಾವನೆಗೈದರು. ಮೇಲ್ವಿಚಾರಕಿ ಲೀಲಾವತಿ ನಿರೂಪಿಸಿದರು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.