ಕಾರ್ಕಳ, ಸೆ 09 (DaijiworldNews/DB): ಹೈನುಗಾರಿಕೆ ಕೃಷಿಯೊಂದಿಗೆ ಕೇವಲ ಉಪಕಸುಬಾಗಿ ಉಳಿದಿಲ್ಲ. ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿ ನೆಮ್ಮದಿಯ ಬದುಕನ್ನು ನೀಡಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ಪಿ .ಸುಚರಿತ ಶೆಟ್ಟಿ ಹೇಳಿದ್ದಾರೆ.
ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಸೆಪ್ಟೆಂಬರ್ 6ರಂದು ಸಂಘದ 17ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲೆಯ ಹೈನುಗಾರ ಸದಸ್ಯರ ನಿರಂತರ ಪರಿಶ್ರಮದಿಂದ ಸಹಕಾರಿ ಹಾಲು ಒಕ್ಕೂಟ, ಕರ್ನಾಟಕ ರಾಜ್ಯದ 16 ಒಕ್ಕೂಟಗಳಲ್ಲಿ ಹಾಲು ಉತ್ಪಾದಕರು ಡೈರಿಗೆ ನೀಡುವ ಹಾಲಿಗೆ ಗರಿಷ್ಠ ಬೆಲೆಯನ್ನು ನೀಡುವ ಜೊತೆಯಲ್ಲಿ ರಾಷ್ಟ್ರಮಟ್ಟದಲ್ಲಿಯೇ ಹಾಲಿನ ಗುಣಮಟ್ಟವನ್ನು *ಕಾಯ್ದುಕೊಳ್ಳುವಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ ಎಂದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರತಿದಿನ ಈ ವರ್ಷ ಗರಿಷ್ಠ 5.5 ಲಕ್ಷ ಲೀಟರ್ ಹಾಲು ಸಂಗ್ರಹದ ಜೊತೆಗೆ ಕಳೆದ ಆರ್ಥಿಕ ವರ್ಷದಲ್ಲಿ ಕೋವಿಡ್ ಕರಿ ಛಾಯೆಯ ಮಧ್ಯೆಯೂ ವಾರ್ಷಿಕ 950 ಕೋಟಿ ರೂ. ವ್ಯವಹಾರ ಮಾಡಿದೆ. ಆ ಮೂಲಕ 8 ಕೋಟಿ ಲಾಭ ಗಳಿಸಿ, ಸದಸ್ಯ ಸಂಘಗಳಿಗೆ ಶೇ. 12 .5 ಶೇರು ಡಿವಿಡೆಂಟ್ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಕೆ. ಪಿ .ಸುಚರಿತ ಶೆಟ್ಟಿ ಹಳಿದರು.
ಸಂಘದ ಅಧ್ಯಕ್ಷರು ಹಾಗೂ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಅಧ್ಯಕ್ಷತೆ ವಹಿಸಿ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿವ್ವಳ ಲಾಭ 2.54 ಲಕ್ಷ ರೂ. ಆಗಿದೆ ಎಂದರು. ಶೇ. 65 ಉತ್ಪಾದಕರ ಬೋನಸ್, ಶೇ.15 ಶೇರು ಡಿವಿಡೆಂಟ್, ಲೆಕ್ಕ ಪರಿಶೋಧನೆಯಲ್ಲಿ ಎ ಶ್ರೇಣಿ ದೊರೆತ್ತಿದೆ ಎಂದು ಘೋಷಿಸಿದರು.
ಸಂಘದ ಮಹಾಸಭೆಗೆ ಆಗಮಿಸಿದ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಕಡಂದಲೆ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿರಾಜ ಉಡುಪ, ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಅಬ್ದುಲ್ ಸಮೀರ್, ಮೇಲ್ವಿಚಾರಕ ಶಿವಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
2021 - 22ನೇ ಸಾಲಿನಲ್ಲಿ ಸಂಘಕ್ಕೆ ಗರಿಷ್ಠ ಹಾಲು ಹಾಕಿದ ಸದಸ್ಯರಾದ ಜೆರೊಮ್ ಡಿ'ಸಿಲ್ವ, ಮಂಜುನಾಥ ರಾವ್, ಸೋಮಶೇಖರ ರಾವ್, ಮಾಲತಿ ,ರಾಯಲ್ ನೊರೊನ್ಹ, ಪ್ರವೀಣ ಶೆಟ್ಟಿ, ರಾಬರ್ಟ್ ಡಿಸೋಜಾ, ಶಮಿತಾ ಜಿ .ಪೂಜಾರಿ, ಶ್ರೀಧರ ಸಮಗಾರ, ಲಿಯೋನಿಲ್ಲ ಡಿಸೋಜ ಮತ್ತು ಉತ್ತಮ ಗುಣಮಟ್ಟದ ಹಾಲು ಪೂರೈಸಿದ ಸುಂದರಶೆಟ್ಟಿ, ರಘುರಾಮ ಸುವರ್ಣ ಮತ್ತು ಯಶೋಧಾ ಸುವರ್ಣ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಳೆದ ಸಾಲಿನ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ, ಹೆತ್ತವರ ಜೊತೆಗೆ ಗೌರವಿಸಲಾಯಿತು. ಒಕ್ಕೂಟದ ನೂತನ ಮೇಲ್ವಿಚಾರಕ ಶಿವಕುಮಾರ್ ಅವರು ಸಂಘದ ಲೆಕ್ಕಪರಿಶೋಧನಾ ವರದಿ ಮಂಡಿದರು. ಸಂಘದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸಂಘದ ವಾರ್ಷಿಕ ವರದಿ ಮತ್ತು ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು. ನಿರ್ದೇಶಕ ಜಯ ಶೆಟ್ಟಿ ಅಂದಾಜು ಬಜೆಟ್ ಮಂಡಿಸಿದರು. ಸಂಘದ ಸ್ಥಾಪಕ ಕಾರ್ಯದರ್ಶಿ ಹಾಗೂ ಕೃತಕ ಗರ್ಭಧಾರಣ ಕಾರ್ಯಕರ್ತ ಜ್ಞಾನದೇವ ಸಂಘದ ಮುಂದಿನ ಕಾರ್ಯ ಯೋಜನೆಗಳ ವಿವರ ಮಂಡಿಸಿದರು. ಉಪಾಧ್ಯಕ್ಷೆ ಯಶೋಧ ಆರ್. ಸುವರ್ಣ ಸ್ವಾಗತಿಸಿ, ನಿರ್ದೇಶಕ ಸೋಮಶೇಖರ್ ವಂದಿಸಿದರು.