ಉಳ್ಳಾಲ, ಫೆ 7(MSP): ಯುವಕನೋರ್ವ ಕಟ್ಟಡದಿಂದ ಬಿದ್ದು ಸಂಶಯಾತ್ಮಕವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿಕಾಡ್ ಎಂಬಲ್ಲಿ ಫೆ.7 ರ ಗುರುವಾರ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಅಂಬಿಕಾ ರೋಡ್ ನಿವಾಸಿ ರಿಕ್ಷಾ ಚಾಲಕ ವಿಜಯ್ ಅವರ ಪುತ್ರ ನಿಶಾನ್(26) ಎಂದು ಗುರುತಿಸಲಾಗಿದೆ.
ತೊಕ್ಕೊಟ್ಟು ಕಾಪಿಕಾಡ್ನಲ್ಲಿರುವ ಭಗವತಿ ಕ್ಲಾಂಪ್ಲೆಕ್ಸ್ ಎಂಬ ಕಟ್ಟಡದಿಂದ ಬಿದ್ದು ನಿಶಾನ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಭಗವತಿ ಕಾಂಪ್ಲೆಕ್ಸ್ನ ಸನಿಹದಲ್ಲೇ ಇರುವ ಮೀರಾ ಆಚಾರಿ ಎಂಬವರ ಮನೆಯ ಅಂಗಳದಲ್ಲಿ ನಿಶಾನ್ ಅವರ ಮೃತದೇಹ ಪತ್ತೆಯಾಗಿದೆ. ನಿಶಾನ್ ಮಾದಕ ವ್ಯಸನಿಯಾಗಿದ್ದು ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೊಳಗಾಗಿದ್ದ.
ಇನ್ನು ಮೃತದೇಹದ ಕೈಯೊಂದು ಮುರಿದಿದ್ದರೆ, ತಲೆ ಹಾಗೂ ದೇಹದ ಇತರ ಭಾಗದಲ್ಲಿ ಯಾವುದೇ ಗಂಭೀರ ಗಾಯಗಳು ಕಾಣಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ಇವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ಮುಂದುವರಿದಿದೆ.