ಉಡುಪಿ, ಸೆ 08 (DaijiworldNews/DB): ಪರ್ಕಳ ಗ್ಯಾಟ್ ಸನ್ ಅಚ್ಯುತ ನಗರ ನಿವಾಸಿ 108 ವರ್ಷದ ನಿವೃತ್ತ ಸೈನಿಕ ಮೈಕಲ್ ಡಿಸೋಜಾ ಅವರು ಸೆಪ್ಟಂಬರ್ 8ರ ಗುರುವಾರದಂದು ನಿಧನರಾದರು.
ಮದ್ರಾಸು ಸರ್ಕಾರದಲ್ಲಿ ಸೈನ್ಯಕ್ಕೆ ಸೇರಿದ್ದ ಅವರು ಮೆಕಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೈಕಲ್ ಡಿಸೋಜ ಅವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು. ಮೂಲತಃ ಮಂಗಳೂರಿನ ಲೇಡಿಹಿಲ್ ನಿವಾಸಿಯಾಗಿದ್ದ ಮೈಕಲ್ ಡಿಸೋಜ ಅವರು ಪರ್ಕಳದ ತಮ್ಮ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಪಿಡಬ್ಲ್ಯೂಡಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ನಾಲ್ಕು ಬೀದಿ ಕಾಂಕ್ರೆಟ್ ರಸ್ತೆ, ಮಂಗಳೂರಿನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು ಮತ್ತು ಉಭಯ ಜಿಲ್ಲೆಯ ಹೆಚ್ಚಿನ ಹಳೆಯದಾದ ಸೇತುವೆಗಳನ್ನು ನಿರ್ಮಿಸುವಾಗ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಶತಾಯುಷಿ ಸೈನಿಕನಿಗೆ 2024ರ ತನಕ ಮಂಗಳೂರಿನ ಆರ್ಟಿಓ ಅವರಿಂದ ನಾಲ್ಕು ಚಕ್ರದ ವಾಹನ ಚಾಲನೆ ಮಾಡುವ ಡ್ರೈವಿಂಗ್ ಲೈಸನ್ಸ್ ಕೂಡಾ ನೀಡಲಾಗಿತ್ತು. ಕಳೆದ ಎರಡು ದಿನಗಳಿಂದ ಅಸ್ವಸ್ಥಗೊಂಡ ಅವರು ಇಂದು ನಿಧನರಾದರು.
75ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಜಯಕರ ಶೆಟ್ಟಿ ಇಂದ್ರಾಳಿವಯರ ಕೋರಿಕೆಯ ಮೇರೆಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅವರು ಸಹಕಾರದಲ್ಲಿ ಇಂದ್ರಾಳಿಯಲ್ಲಿರುವ ಲಯನ್ಸ್ ಕ್ಲಬ್ನ ಜಯಸಿಂಹ ಸಭಾಂಗಣದಲ್ಲಿ ಕೊನೆಯದಾಗಿ ಧ್ವಜಾರೋಹಣ ಮಾಡಿದ್ದರು. ಶನಿವಾರ ಬೆಳಗ್ಗೆ ಪರ್ಕಳದ ಅಚ್ಯುತ ನಗರದ ಮನೆಯಲ್ಲಿ ಗೌರವ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೈಕಲ್ ಡಿಸೋಜ ಅವರ ಪತ್ನಿ ಎಲಿಸಾ ಡಿಸೋಜ 9 ವರ್ಷಗಳ ಹಿಂದೆ ಮೃತ ಪಟ್ಟಿದ್ದಾರೆ.