ಮಂಗಳೂರು, ಸೆ 08 (DaijiworldNews/DB): ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕರಾಗಿ ನವೀನ್ ಆರ್. ಡಿಸೋಜಾ ಅವರನ್ನು ಆಯ್ಕೆ ಮಾಡಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಬುಧವಾರ ಆದೇಶ ಹೊರಡಿಸಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಯು.ಟಿ. ಖಾದರ್, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಸಂತ ಬಂಗೇರ, ಮೊಯ್ದೀನ್ ಬಾವ, ಜೆ.ಆರ್. ಲೋಬೊ, ಶಕುಂತಲಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹಾಗೂ ಮನಪಾದ ಕಾಂಗ್ರೆಸ್ ಸದಸ್ಯರ ಸರ್ವಾನುಮತದಿಂದ ನವೀನ್ ಆರ್. ಡಿಸೋಜಾ ಅವರನ್ನು ಆಯ್ಕೆ ಮಾಡಲಾಗಿದೆ.
2002ರಿಂದ ಬೆಂದೂರ್-38ನೇ ವಾರ್ಡ್ನಿಂದ ಸತತ 4ನೇ ಬಾರಿ ಮ.ನ.ಪಾ ಸದಸ್ಯರಾಗಿ ಚುನಾಯಿತರಾಗಿರುವ ನವೀನ್ ಆರ್. ಡಿಸೋಜಾ ಅವರು ಅಖಿಲ ಭಾರತ ಯುವಕ ಕಾಂಗ್ರೆಸ್ ನ ರಾಷ್ಟ್ರೀಯ ಸಂಯೋಜಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ, ಮನ.ಪಾ ಸ್ಥಾಯಿ ಸಮಿತಿ, ತೆರಿಗೆ-ಹಣಕಾಸು ಹಾಗೂ ಆರೋಗ್ಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಕೆಪಿಸಿಸಿ ಸಂಯೋಜಕರಾಗಿ ಹಾಗೂ ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಸದಸ್ಯರಾಗಿ ಕಾರ್ಯ ನಿರ್ಹಿಸುತ್ತಿದ್ದಾರೆ.