ಬಂಟ್ವಾಳ, ಸೆ 08 (DaijiworldNews/DB): ಸರ್ಕಾರದ ಜೊತೆಗೆ ಮಕ್ಕಳ ಪೋಷಕರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸರ್ಕಾರಿ ಶಾಲೆ ಬೆಳವಣಿಗೆ ಕಾಣಲು ಸಾಧ್ಯವಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ತಾರಕೇಶ್ವರಿ ಹೇಳಿದ್ದಾರೆ.
ಇಲ್ಲಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಸಿದ್ಧಕಟ್ಟೆ ಸಮೀಪದ ಆರಂಬೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಲಬ್ ಅಧ್ಯಕ್ಷೆ ಶೃತಿ ಮಾಡ್ತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಲಬ್ ಕೋಶಾಧಿಕಾರಿ ಕಿರಣ್ ಕುಮಾರ್ ಮಂಜಿಲ ಮತ್ತು ಬೇಬಿ ಕೆ. ಮಂಜಿಲ ದಂಪತಿ ತಮ್ಮ ಪುತ್ರಿ ನಿಯಾ ಅವರ 3ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ 65 ಸಾವಿರ ರೂ. ವೆಚ್ಚದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರಿಸಿದರು. ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಕ್ಲಬ್ನ ವಲಯ ಸೇನಾನಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಕಾರ್ಯದರ್ಶಿ ವಿಜಯ ಫೆರ್ನಾಂಡಿಸ್, ಸದಸ್ಯ ಹರಿಪ್ರಸಾದ್ ಶೆಟ್ಟಿ ಕುರುಡಾಡಿ ಶುಭ ಹಾರೈಸಿದರು.
ಆರಂಬೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಹುಲಿಮೇರು, ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಎಂ., ಸದಸ್ಯ ಉಮೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುಶೀಲಾ ಸ್ವಾಗತಿಸಿ, ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.