ಹಿರಿಯಡ್ಕ, ಸೆ 08 (DaijiworldNews/MS): ಉಡುಪಿ ಜಿಲ್ಲೆಯ ಹಿರಿಯಡ್ಕ ಪೇಟೆ ಸಮೀಪದ ಪಾಳು ಬಿದ್ದ ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಂದ್ರಿಕಾ ರಂಜನ್ ಕೇಳ್ಕರ್ ಅವರಿಗೆ ಸೇರಿದ ಈ ಮನೆಯಲ್ಲಿ ಚಿರತೆ ಅವಿತಿರುವ ಮಾಹಿತಿಯನ್ನು ಸ್ಥಳಿಯರು ಅರಣ್ಯಾಧಿಕಾರಿಗಳಿಗೆ ನೀಡಲಾಗಿತ್ತು. ಚಿರತೆ ಇರುವ ಸಂಗತಿ ತಿಳಿದು ಸ್ಥಳೀಯರೆಲ್ಲ ಬಂದು ಮನೆಯ ಸುತ್ತಮುತ್ತ ಸೇರಿದ್ದರು. ಚಿರತೆ ಸೆರೆ ಹಿಡಿಯಲು ಸಾರ್ವಜನಿಕರ ನೆರವಿನೊಂದಿಗೆ ಅರಣ್ಯ ಇಲಾಖೆಯವರು ಮುಂದಾಗಿದ್ದು 10 ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಬುಧವಾರ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಂಜನ್ ಕೆಳ್ಕರ್ ಮನೆಯೊಳಗೆ ಚಿರತೆ ಇರುವುದು ಗಮನಿಸಿದ್ದರು. ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದರು. ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆಗೆ ಇಳಿದಿದ್ದು , ಬುಧವಾರ ಹಿಡಿಯಲು ಸಫಲರಾದರು.
ದಿನವಿಡೀ ಕಾರ್ಯಾಚರಣೆ ನಡೆಸುವ ಮೂಲಕ ಚಿರತೆಯನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಮೊದಲು ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ದಿನವಿಡೀ ಕಾರ್ಯಾಚರಣೆ ನಡೆಸುವ ಮೂಲಕ ಚಿರತೆಯನ್ನು ಕೊನೆಗೂ ಸೆರೆಹಿಡಿಯಲಾಗಿದೆ.
ಅರವಳಿಕೆ ತಜ್ಞರಾದ ಡಾ. ಮೇಘನಾ ಸ್ಥಳಕ್ಕೆ ಬಂದು ಚಿರತೆಗೆ ಚುಚ್ಚುಮದ್ದು ಹಾಕಲು ನಡೆಸಿದ ಒಂದೆರಡು ಪ್ರಯತ್ನಗಳು ವಿಫಲವಾದವು. ಸಂಜೆಯ ವೇಳೆಗೆ ಕೊನೆಗೂ ಚಿರತೆಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಮನೆಯೊಳಗೆ ತೆರಳಿ ಮತ್ತೊಮ್ಮೆ ಚುಚ್ಚುಮದ್ದು ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಮನೆಯಿಂದ ರಕ್ಷಿಸಲಾಯಿತು.
ಮೊದಲೇ ಸಿದ್ಧಪಡಿಸಿದ್ದ ಬೋನಿನೊಳಗೆ ಚಿರತೆಯನ್ನು ಹಾಕಿ ಕೊಂಡೊಯ್ಯಲಾಗಿದೆ. ಸುಮಾರು ಮೂರು ವರ್ಷ ಪ್ರಾಯದ ಈ ಗಂಡು ಚಿರತೆಗೆ ಮೈತುಂಬಾ ಗಾಯಗಳಾಗಿವೆ. ಐದಾರು ದಿನಗಳ ಮುಂಚೆ ಈ ಮನೆಯೊಳಗೆ ಚಿರತೆ ನುಗ್ಗಿರುವ ಸಾಧ್ಯತೆ ಇದ್ದು, ಸರಿಯಾದ ಆಹಾರ ಸಿಗದೇ ಕಂಗಾಲಾಗಿತ್ತು. ಅದೃಷ್ಟವಶಾತ್ ಈ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಇದೀಗ ಸೆರೆ ಹಿಡಿದಿರುವ ಚಿರತೆಗೆ ಚಿಕಿತ್ಸೆಯನ್ನು ನೀಡಿ ನಂತರ ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ತಯಾರಿ ನಡೆಸಿದ್ದಾರೆ. ದಿನವಿಡೀ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆಯ ರಾಜಿ ಮ್ಯಾಥ್ಯೂ , ಸುನೀಶ್ ಬಾಬು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು