ಈಶ್ವರಮಂಗಲ, ಸೆ 07 (DaijiworldNews/MS): ಪುತ್ತೂರಿನಿಂದ ಈಶ್ವರಮಂಗಲ ಮಾರ್ಗವಾಗಿ ಸುಳ್ಯ ಪದವು ಕಡೆಗೆ ಸಂಜೆ ಬರುತ್ತಿದ್ದ ಸರಕಾರಿ ಬಸ್ ಗೆ ಹತ್ತಲೆತ್ನಿಸಿದ ಪಾನ ಮತ್ತ ಪ್ರಯಾಣಿಕೋರ್ವನಿಗೆ ನಿರ್ವಾಹಕ ಮೆಟ್ಟಿಲಲ್ಲೇ ತಡೆದು ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ಒದ್ದು ಹಾಕಿದ ಘಟನೆ ಸೆ.೦೭ ರ ಬುಧವಾರ ಸಂಜೆ ಈಶ್ವರ ಮಂಗಲ ಪೇಟೆಯಲ್ಲಿ ನಡೆದಿದೆ.
ಸಂಜೆ ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ ಎಂಬವರು ಪದಡ್ಕ ಹೋಗಲು ಬಸ್ಸನ್ನು ಹತ್ತಿದ್ದು, ಮದ್ಯಪಾನ ಮಾಡಿರುವುದನ್ನು ಗಮನಿಸಿದ ನಿರ್ವಾಹಕ ಸುಖ್ ರಾಜ್ ರೈ , ಪ್ರಯಾಣಿಕ ಕೃಷ್ಣಪ್ಪ ರವರನ್ನು ಕೈಯಿಂದ ದೂಡಿ ಕೈಯಲ್ಲಿದ್ದ ಕೊಡೆ ಮತ್ತಿತರ ವಸ್ತುಗಳನ್ನು ಕಸಿದು ಹೊರಕ್ಕೆ ಎಸೆದಿದ್ದಾನೆ. ಬಳಿಕ ಕಪಾಳಕ್ಕೆ ಬಾರಿಸಿ , ಹಲ್ಲೆ ನಡೆಸಿ ಕಾಲಿನಿಂದ ಒದ್ದಿರುವುದರಿಂದ ಪ್ರಯಾಣಿಕ ಕೃಷ್ಣಪ್ಪ ಕೆಳಗೆ ರಸ್ತೆಗೆ ಬಿದ್ದಿದ್ದಾರೆ. ಹೊರಳಾಡುತ್ತಾ ಬಿದ್ದಿರುವ ಕೃಷ್ಣಪ್ಪರನ್ನು ನಿರ್ವಾಹಕ ಹಾಗೆ ಬಿಟ್ಟು ತೆರಳಿದ ತೆರಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಷಯ ತಿಳಿದ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಸರಕಾರಿ ಬಸ್ ನ ಪುತ್ತೂರು ಘಟಕವನ್ನು ಸಂಪರ್ಕಿಸಿ ಬಸ್ಸು ನಿರ್ವಾಹಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕೃತ್ಯದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು ಕೃತ್ಯಕ್ಕೆ ಕಾರಣರಾದ ಬಸ್ ನಿರ್ವಾಹಕನನ್ನು ಅಮಾನತುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವೈರಲ್ ಆದ ವಿಡಿಯೋ ಗಮನಿಸಿ, ಪ್ರಯಾಣಿಕರ ಮೇಲೆ ಕೈ ಮಾಡುವ ತುಳಿಯುವ ಅಧಿಕಾರ ನಿರ್ವಾಹಕರಿಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿ ನಿರ್ವಾಹಕನನ್ನು ಅಮಾನತು ಮಾಡುತ್ತಿದ್ದೇವೆ. ಇದು ಅಕ್ಷಮ್ಯವಾಗಿದ್ದು ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ಕೆ ಎಸ್ ಆರ್ ಟಿಸಿ ಪುತ್ತೂರು ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.