ಮಂಗಳೂರು/ಉಡುಪಿ, ಸೆ 08 (DaijiworldNews/DB): ಕರಾವಳಿ ಜಿಲ್ಲೆಗಳ ಚರ್ಚ್ಗಳಲ್ಲಿ ಮೊಂತಿ ಫೆಸ್ತ್ನ್ನು ಭಕ್ತಿ ಮತ್ತು ಸಂಭ್ರಮದಿಂದ ಸೆಪ್ಟಂಬರ್ 8ರ ಗುರುವಾರ (ಇಂದು) ಆಚರಿಸಲಾಗುತ್ತಿದೆ.
ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ಹಬ್ಬ ಆಚರಿಸಲಾಗಿದ್ದರೆ, ಈ ಬಾರಿ ಅದ್ದೂರಿಯಾಗಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಸೆಪ್ಟಂಬರ್ 8 ಯೇಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನ, ತೆನೆ ಹಬ್ಬ ಮತ್ತು ಹೆಣ್ಮಕ್ಕಳ ದಿನವನ್ನು ಸಂಯುಕ್ತವಾಗಿ ಮೊಂತಿ ಫೆಸ್ತ್ ಎಂದು ಆಚರಿಸಲಾಗುತ್ತದೆ. ಒಂಬತ್ತು ದಿನಗಳ ವಿಶೇಷ ನೊವೆನಾ ಪ್ರಾರ್ಥನೆ ಬಳಿಕ ಮೊಂತಿ ಫೆಸ್ತ್ ಆಚರಣೆ ನಡೆಯುತ್ತದೆ.
ಸಾಂಸ್ಕೃತಿಕವಾಗಿಯೂ ಈ ಹಬ್ಬ ಮಹತ್ವ ಪಡೆದಿದೆ. ಕೆಥೋಲಿಕ್ ಕ್ರಿಶ್ಚಿಯನ್ ಸಮುದಾಯಕ್ಕೆ ಈ ಹಬ್ಬ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಚರ್ಚ್ಗಳಲ್ಲಿ ಹೊಸತೆನೆಯ ಆಶೀರ್ವಚನ, ವಿತರಣೆ, ಮೆರವಣಿಗೆ,ಪುಷ್ಪಾರ್ಚನೆ ಮೂಲಕ ಮೇರಿ ಮಾತೆಗೆ ನಮನ, ಧರ್ಮ ಗುರುಗಳಿಂದ ಹಬ್ಬದ ಸಂದೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರಗುತ್ತಿವೆ. ಈ ಹಬ್ಬದಂದು ಸ್ಥಳೀಯವಾಗಿ ಬೆಳೆದ ತರಕಾರಿಗಳಿಂದಲೇ ಆಹಾರ ತಯಾರಿಸಿ ಉಣಬಡಿಸುವುದು ವಾಡಿಕೆ.
ನಗರದ ಮಿಲಾಗ್ರಿಸ್, ಬೆಂದೂರು, ಜಪ್ಪು, ವೆಲೆನ್ಸಿಯಾ, ಕಾಸ್ಸಿಯಾ, ಬಿಜೈ, ಆಂಜೆಲೋರ್, ಉರ್ವ, ಅಶೋಕನಗರ, ಬೋಂದೆಲ್, ಕುಲಶೇಖರ, ಕೂಳೂರು ಮತ್ತು ಇತರ ಚರ್ಚ್ಗಳಲ್ಲಿ ವಿವಿಧ ಪೂಜಾ ವಿಧಿಗಳು ನಡೆಯುತ್ತಿವೆ. ಜಗತ್ತಿನಾದ್ಯಂತ ನೆಲೆಸಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕ್ಯಾಥೋಲಿಕನ್ನರು ಹಬ್ಬವನ್ನು ಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ.