ಕಾಸರಗೋಡು, ಸೆ 07 (DaijiworldNews/MS): ಕೇರಳೀಯರ ಸಂಭ್ರಮದ ಓಣಂ ಹಬ್ಬ ಸಡಗರ ನಡೆಯುತ್ತಿದೆ.ಓಣಂ ಹಬ್ಬಕ್ಕಾಗಿ ಕಳೆದೆರಡು ದಿನಗಳಿಂದ ಕಾಸರಗೋಡು ನಗರದಲ್ಲಿ ಬಿರುಸಿನ ವ್ಯಾಪಾರ ನಡೆದಿದೆ.
ಕೋವಿಡ್ನಿಂದಾಗಿ ಕಳೆದೆರಡು ವರ್ಷಗಳಲ್ಲಿ ಓಣಂ ಪೂರ್ಣ ಪ್ರಮಾಣದಲ್ಲಿ ಆಚರಿಸಲಾಗಿಲ್ಲ. ಪ್ರತಿ ಬಾರಿ ಓಣಂ ಸಂದರ್ಭ ಕಾಸರಗೋಡು ಜಿಲ್ಲೆಗೆ ಹೊರ ರಾಜ್ಯಗಳಿಂದಲೇ ಹೂಗಳ ಸರಬರಾಜಾಗುತ್ತದೆ. ಕರ್ನಾಟಕದ ಹಾಸನ, ಚಿಕ್ಕ ಮಗಳೂರು ಸಹಿತ ವಿವಿಧ ಕಡೆಗಳಿಂದ ಬೆಳಗ್ಗೆಯೇ ಬಂದು ವ್ಯಾಪಾರಿಗಳು ಹೂವಿನ ಮಾರಾಟದ ನಡೆಸಿದ್ದಾರೆ . ಪೂಕಳಂ ರಚನೆಗಾಗಿಯೇ ವಿವಿಧ ತರಹದ ಹೂಗಳನ್ನು ತರಲಾಗಿದೆ. ನೀಲಿ, ಹಳದಿ, ಬಿಳಿ ಸೇವಂತಿಗೆ, ಮಲ್ಲಿಗೆ, ಮಾರಿಗೋಲ್ಡ್, ಚೆಂಡು ಮಲ್ಲಿಗೆ, ಗೊಂಡೆ ಹೂ, ನೀಲಿ ಜೀನಿ ಹೀಗೆ ವಿವಿಧ ಬಣ್ಣಗಳ ಹೂವಿನೊಂದಿಗೆ ನಗರದಲ್ಲಿ ಬಿರುಸಿನ ವ್ಯಾಪಾರದ ನಡೆದಿದೆ .
ಕರ್ನಾಟಕದಿಂದ ಬರುವ ಹೂವಿನಿಂದಾಗಿ ನಗರದಲ್ಲೆಡೆ ಹೂ ಅಗ್ಗದಲ್ಲಿ ಲಭ್ಯವಿದೆ. ಮಂಗಳೂರು ಹಾಗೂ ಇತರ ಕಡೆಗಳಿಂದ ಭಾರಿ ಬೆಲೆ ತೆತ್ತು ಹೂ ತರಬೇಕಾದ ಅನಿವಾರ್ಯತೆ ಇತ್ತು. ಆದರೆ ಯಥೇಚ್ಛ ಹೂ ಲಭಿಸಿರುವುದು ಓಣಂ ಹಬ್ಬಕ್ಕೆ ಮೆರುಗು ನೀಡಿದೆ.