ಪಡುಬಿದ್ರಿ, ಫೆ 7(MSP): ಪೆಟ್ರೋಲ್ ಪಂಪ್ ಉದ್ಯೋಗಿಯೋರ್ವನಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಬಡಾ ಎರ್ಮಾಳು ಪೆಟ್ರೋಲ್ ಪಂಪ್ ಉದ್ಯೋಗಿ, ಗುಂಡ್ಯ ನಿವಾಸಿ ಪ್ರದೀಪ್ ಕೆ. ಎಂ. (46) ಎಂದು ಗುರುತಿಸಲಾಗಿದೆ.
ಫೆ. 5 ರಂದು, ರಾತ್ರಿ ವೇಳೆಗೆ ಪ್ರದೀಪ್ ಡ್ಯೂಟಿಯಲ್ಲಿರುವ ಸಮಯದಲ್ಲಿ ಆಸೀಫ್ ಹಾಗೂ ಫಾರೂಕ್ ಎಂಬಿಬ್ಬರು ಪೆಟ್ರೋಲ್ ಹಾಕಲೆಂದು ಬಂಕ್ ಗೆ ಬಂದಿದ್ದಾರೆ. ಪೆಟ್ರೋಲ್ ಹಾಕುವ ಸಮಯದಲ್ಲಿ ಪಂಪ್ ಬಳಿಯೇ ಗುಟ್ಕಾ ತಿಂದು ಉಗುಳಿದ್ದರು. ಆಗ ಪ್ರದೀಪ್ ಅವರು, ಇಲ್ಲಿ ಗುಟ್ಕಾ ಉಗುಳಿ ಗಲೀಜು ಮಾಡಬೇಡಿ ಸ್ವಚ್ಚತೆ ಕಾಪಾಡಿ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ಮತ್ತಷ್ಟು ಗುಟ್ಕಾವನ್ನು ಬಾಯಲ್ಲಿ ಹಾಕಿ ಪ್ರದೀಪ್ ಮುಖಕ್ಕೆ ಉಗುಳಿದ್ದಾರೆ. ಇಷ್ಟು ಮಾತ್ರವಲ್ಲದೆ ಹತ್ತು ನಿಮಿಷ ಕಳೆದು ವಾಪಸ್ ಬಂಕ್ ಗೆ ಆಗಮಿಸಿ ಪ್ರದೀಪರ ಹಣೆ ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗಾಯಗೊಂಡಿರುವ ಪ್ರದೀಪ್ಗೆ ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.