ಉಳ್ಳಾಲ, ಸೆ 07 (DaijiworldNews/DB): ತೆಂಗಿನಕಾಯಿ ಕೀಳಲೆಂದು ಮರವೇರಿದ್ದ ವೇಳೆ ಕಣಜದ ಹುಳುಗಳ ಧಾಳಿಗೊಳಗಾಗಿ ಗಂಭೀರ ಗಾಯಗೊಂಡಿದ್ದ ಉಳ್ಳಾಲಬೈಲಿನ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಗಳನ್ನು ಶಾಲೆಗೆ ಬಿಡಲು ತೆರಳಿದ ವ್ಯಕ್ತಿಯೂ ನೊಣಗಳ ದಾಳಿಯಿಂದಾಗಿ ಗಂಭೀರ ಗಾಯಗೊಂಡಿದ್ದಾರೆ.
ಉಳ್ಳಾಲಬೈಲು ನಿವಾಸಿ ಜಿತನ್ ರಸ್ಕಿನ್ಹ (38) ಮೃತಪಟ್ಟವರು. ಉಳ್ಳಾಲಬೈಲಿನ ಭವಾನಿ ಎಂಬವರ ಮನೆಯಲ್ಲಿ ಮರವೇರುವ ತೆಂಗಿನಯಂತ್ರದ ಮೂಲಕ ತೆಂಗಿನಕಾಯಿ ಕೀಳುತ್ತಿದ್ದರು. ಈ ವೇಳೆ ಮರದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಅವರ ಮೇಲೆ ದಾಳಿ ನಡೆಸಿವೆ. ಗಂಭೀರ ಗಾಯಗೊಂಡಿದ್ದ ಅವರನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ಅವರು ಮೃತಪಟ್ಟರು.
ಅಲ್ಲದೆ, ಜಿತನ್ ಮೇಲೆ ದಾಳಿ ನಡೆಸಿದ್ದ ಹುಳುಗಳು ಇದೇ ವೇಳೆ ಈ ದಾರಿಯಾಗಿ ಮಗಳನ್ನು ಶಾಲಾ ವಾಹನಕ್ಕೆ ಬಿಡಲೆಂದು ಕರೆದೊಯ್ಯುತ್ತಿದ್ದ ಪ್ರವೀಣ್ ಪೂಜಾರಿ ಮತ್ತು ಅವರ ಪುತ್ರಿ ಧೃತಿಗೂ ಕಣಜದ ಹುಳು ಕಚ್ಚಿದೆ. ಇಬ್ಬರೂ ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಪ್ರವೀಣ್ ಅವರ ತಲೆಗೆ ಹುಳುಗಳು ಕಚ್ಚಿದ್ದು, ಸಂಜೆ ವೇಳೆಗೆ ಅವರು ವಾಂತಿ ಮಾಡಲಾರಂಭಿಸಿದ್ದು, ಕೂಡಲೇ ಅವರನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲತಃ ನೀರುಮಾರ್ಗದವರಾದ ಜೀತನ್ ಪತ್ನಿ ರೋಹಿತ ಬ್ರಾಕ್ಸ್ ಅವರು ಪ್ರಸ್ತುತ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಪತಿ ಸಾವಿನಿಂದ ಆಘಾತಕ್ಕೊಳಗಾಗಿರುವ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.