ಕಾಸರಗೋಡು, ಸೆ 07 (DaijiworldNews/HR): ಮಾತೃಭೂಮಿ ಸ್ವರ್ಗ ಇದರ ವತಿಯಿಂದ ಸ್ವರ್ಗ ಎಸ್.ವಿ.ಎ.ಯು.ಪಿ ಶಾಲೆಯಲ್ಲಿ ನಡೆದ ನಾಡ ಹಬ್ಬ ಓಣಂ ಕಾರ್ಯಕ್ರಮದ ಸಮರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಮಾವೇಲಿ, ಯಕ್ಷಗಾನ ವೇಷಧಾರಿ, ಗೊಂಬೆ ವೇಷಗಳೊಂದಿಗೆ ನಡೆದ ಆಕರ್ಷಕ ಮೆರವಣಿಗೆಯು ವಿಶೇಷ ಮೆರಗು ನೀಡಿತು.ಸುಂದರ ಮೂಲ್ಯ ಅಜಕ್ಕಳ ಮೂಲೆ ಅವರ ಮಹಾಬಲಿ ವೇಷ, ವತ್ಸಲ ಪೆರಿಕ್ಕಾನ ಹಾಗೂ ಅನನ್ಯ ಮೈಕಾನ ಅವರ ಯಕ್ಷಗಾನ ವೇಷಗಳು ಮೆರವಣಿಗೆಗೆ ಮೆರಗು ನೀಡಿದವು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಎಂ ವಹಿಸಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿದ ಪಡ್ರೆ ಗ್ರಾಮಾಧಿಕಾರಿಗಳಾದ ಶಂಕರ ಕುಂಜತ್ತೂರು ಮಾತಾಡಿ, ಭೂಮಿ ತಾಯಿ ನಾಮಂಕಿತ ಮಾತೃಭೂಮಿ ಸಂಘಟನೆ ಆಯೋಜಿಸಿದ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಓಣಂ ಹಬ್ಬದ ಆಚರಣೆಯು ಜನತೆಯನ್ನು ಒಗ್ಗೂಡಿಸುವ ಹಬ್ಬ. ಹಬ್ಬದ ಆಚರಣೆಯು ಮುಂದಿನ ಪೀಳಿಗೆಯ ಅನುಸರಣೆಗೆ ಸಹಕಾರಿ. ವಿವಿಧ ಮಾಸಗಳಲ್ಲಿ ವಿವಿಧ ಆಚರಣೆಯು, ವಿವಿಧ ಕಡೆಗಳಲ್ಲಿ ವಿವಿಧ ಹೆಸರುಗಳಲ್ಲಿ ಆಚರಣೆ, ತುಳುನಾಡಿನ ಆಚರಣೆಗಳೊಂದಿಗೆ ಬೆಸೆದುಕೊಂಡಿದೆ ಎಂದರು.
ಪ್ರಧಾನ ಅಭ್ಯಾಗತರಾಗಿ ಪ್ರಗತಿ ಸ್ಪೆಷಲ್ ಶಾಲಾ ಶಿಕ್ಷಕಿ ಶ್ರೀಮತಿ ರಮ್ಯಾ, ಸ್ವರ್ಗ ಶಾಲಾ ಅಧ್ಯಾಪಕಿ ಶ್ರೀಮತಿ ಗೀತಾಂಜಲಿ, ಪ್ರಗತಿಪರ ಲೇಖಕ ಸುಂದರ ಬಾರಡ್ಕ, ಮಾತೃಭೂಮಿ ಸಂಘಟನೆಯ ಅಧ್ಯಕ್ಷರಾದ ರವಿರಾಜ್ ಎಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಲ್ಲೂ ಎ ಪ್ಲಸ್ ಪಡೆದ ಧನುಷ್ ಪಿ.ಪೆರಿಕ್ಕಾನ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿಶ್ರೀತಾ ವಾಣೀನಗರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಂಘಟನೆ ಕಾರ್ಯದರ್ಶಿ ನವೀನ್ ಎಂ ಸ್ವಾಗತಿಸಿದರು. ಬಾಬು ಎಸ್ ಸ್ವರ್ಗ, ಪೂರ್ಣಿಮ ಬೈರಡ್ಕ, ಶಶಿಕಲಾ ಕೆದಂಬಾಯಿಮೂಲೆ, ಕೀರ್ತಿ ಬೈರಡ್ಕ, ರಾಜೇಶ್ ಬೈರಡ್ಕ ಸಂಘಟನೆಯ ಆಶಯದ ಗೀತೆ ಹಾಡಿದರು. ರಶ್ಮಿ ಎಸ್ ಸಂಜಗದ್ದೆ ಮತ್ತು ಕಾವ್ಯಶ್ರೀ ಸ್ವರ್ಗ ಪ್ರಾರ್ಥಿಸಿದರು. ರಾಜೇಶ್ ಬೈರಡ್ಕ ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ಎಂ ವಂದಿಸಿದರು.
ಅನಂತರ ಸಂಘಟನೆಯ ಸದಸ್ಯೆಯರಿಂದ ತಿರುವಾದಿರಕಳಿ ನೃತ್ಯ ನಡೆಸಿಕೊಟ್ಟರು. ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಮಕ್ಕಳಿಗೆ, ಶಾಲಾ ಮಕ್ಕಳಿಗೆ ,ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.