ಮಂಗಳೂರು, ಫೆ 06(SM): 2008ರಲ್ಲಿ ಮಂಗಳೂರಿನ ಮೀಲಾಗ್ರಿಸ್ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಏಸುಕ್ರಿಸ್ತರ ಮೂರ್ತಿಯ ಎಡಗೈ ಮುರಿದು ದಾಂದಲೆ ನಡೆಸಿದ ಪ್ರಕರಣವನ್ನು ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿಕೊಂಡಿದ್ದ ಅಂದಿನ ಬಜರಂಗದಳ ಸಂಚಾಲಕ ಮಹೇಂದ್ರ ಕುಮಾರ್ ಮೇಲೆ ಇದ್ದ ಕೊನೆಯ ಕೇಸ್ ಮಂಗಳವಾರ ಖುಲಾಸೆಗೊಂಡಿದೆ.
ಸೆಪ್ಟೆಂಬರ್ 14ರಂದು ಬೆಳಗ್ಗೆ 15 ಮಂದಿ ಸೇರಿಕೊಂಡು ಮಿಲಾಗ್ರಿಸ್ ಬಳಿಯ ಎಡೋರೇಶನ್ ಮೊನೆಸ್ಟ್ರಿಯಲ್ಲಿ ಧರ್ಮ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಿರುವ ಸಂದರ್ಭ ಮರದ ದೊಣ್ಣೆಯಿಂದ ಕಿಟಕಿ ಗಾಜುಗಳನ್ನು ಪುಡಿ ಮಾಡಿ, ಕ್ರೈಸ್ತ ದೇವರ ಸೇಕ್ರಮೆಂಟ್ ಮತ್ತು ಏಸು ದೇವರ ಮೂರ್ತಿಯ ಎಡಗೈಯನ್ನು ಮುರಿದು ಹಾಕಿದ್ದರು.
ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ನಡೆದಿದ್ದವು. ಈ ಎಲ್ಲ ಪ್ರಕರಣಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಂದ್ರ ಕುಮಾರ್ ದಾಳಿಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು. ಈ ಕುರಿತು ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಜೆಎಂಎಫ್ಸಿ 2ನೇ ನ್ಯಾಯಾಲಯದ ನ್ಯಾಯಾಧೀಶ ಮಹೇಶ್ ಬಿ.ಟ. ವಿಚಾರಣೆ ನಡೆಸಿ ಆರೋಪ ಮುಕ್ತ ಗೊಳಿಸಿ ತೀರ್ಪು ನೀಡಿದ್ದಾರೆ. 10 ವರ್ಷಗಳ ಕಾಲ ನಡೆದ ಪ್ರಕರಣದಲ್ಲಿ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಪತ್ರಿಕೆಯವರೂ ಸಾಕ್ಷಿ ನುಡಿದಿದ್ದರು.
ಈ ಪ್ರಕರಣದಲ್ಲಿ ಅಂದಿನ ಇನ್ಸ್ಪೆಕ್ಟರ್ ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರು ಮಹೇಂದ್ರ ಕುಮಾರ್ ಅವರನ್ನು ಬಂಧಿಸಿದ್ದರು. ಮಹೇಂದ್ರ ಕುಮಾರ್ ಪರವಾಗಿ ಪಿ.ಪಿ. ಹೆಗ್ಡೆ ಅಸೋಸಿಯೇಶನ್ ನ ವಕೀಲ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು.