ಮಂಗಳೂರು, ಸೆ 07 (DaijiworldNews/MS): ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣದಲ್ಲಿ ಮೀನುಗಾರಿಕೆ ನಿರ್ದೇಶನಾಲಯದ ನಿವೃತ್ತ ಜಂಟಿ ನಿರ್ದೇಶಕ ಗಂಗಾಧರ ವಿ. ಮಡ್ಡಿಕೇರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 5 ವರ್ಷಗಳ ಕಾಲ ಸಾದಾ ಸಜೆ ಮತ್ತು 1.30 ಕೋ.ರೂ. ದಂಡ ವಿಧಿಸಿ ಶಿಕ್ಷೆ ವಿಧಿಸಿದೆ.
ಗಂಗಾಧರ ವಿ. ಮಡ್ಡಿಕೇರಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ವಿರುದ್ಧ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 2013ರ ಆ. 5ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಅಪರಾಧಿಗೆ ಕಲಂ 13(1) (ಇ) ಮತ್ತು 13(2) ಲಂಚ ನಿರೋಧ ಕಾಯ್ದೆ 1988ರಡಿ 5 ವರ್ಷಗಳ ಕಾಲ ಸಾದಾ ಸಜೆ ಹಾಗೂ 1.30 ಕೋ.ರೂ. ದಂಡ, ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
ಪೊಲೀಸ್ ಉಪಾಧೀಕ್ಷಕ ವಿಟಲದಾಸ್ ಪೈ ಅವರು ಆರಂಭಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಪೊಲೀಸ್ ಉಪಾಧೀಕ್ಷಕ ಉಮೇಶ್ ಜಿ. ಶೇಟ್ ತನಿಖೆ ಮುಂದುವರಿಸಿದ್ದರು. ಹಾಲಿ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿದ್ದು ಈ ಹಿಂದೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾಗಿದ್ದ ಎಸ್.ವಿಜಯ ಪ್ರಸಾದ್ ಅವರು ತನಿಖೆ ಪೂರ್ಣಗೊಳಿಸಿ 2015ರ ಡಿ. 4ರಂದು ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ