ಮಂಗಳೂರು, ಸೆ 06 (DaijiworldNews/MS): 5ನೇ ತರಗತಿಯ ವಿದ್ಯಾರ್ಥಿನಿಗೆ , ಶಾಲೆಯ ಬಸ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ , 5 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳು ಸೆರೆಮನೆ ಹಾಗೂ ಮತ್ತೊಂದು ಕಾಯ್ದೆಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ, ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಮಂಗಳೂರಿನ ದ.ಕ. ಜಿಲ್ಲಾ ಫಾಸ್ಟ್ ಟ್ರಾಕ್ ನ್ಯಾಯಾಲಯ ಪ್ರಕಟಿಸಿ ಮಂಗಳವಾರ ಆದೇಶ ನೀಡಿದೆ.
ಆರೋಪಿಯಾಗಿದ್ದ ಕಿನ್ನಿಗೋಳಿ ಸಮೀಪದ ಹೊಸ ಕಾವೇರಿಯ ವಿಜಯ ಯಾನೆ ಉಮೇಶ ಎಂಬಾತ ಶಿಕ್ಶೆಗೆ ಒಳಗಾದಾತ. ಈತನ ವಿರುದ್ದ 2019 ಸೆ. 16ರಂದು ದೂರು ದಾಖಲಾಗಿತ್ತು.
ಕಿನ್ನಿಗೋಳಿ ಖಾಸಗಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಬಾಲಕಿ ಅಂಗಲವಿಕಲೆಯಾಗಿದ್ದು ಸ್ಥಳೀಯ ಫ್ಲ್ಯಾಟ್ ಒಂದರಲ್ಲಿ ಹೆತ್ತವರೊಂದಿಗೆ ವಾಸವಿದ್ದಳು. ಆರೋಪಿ ಶಾಲೆಯ ಬಸ್ ಚಾಲಕನಾಗಿದ್ದ. ಬಾಲಕಿಯನ್ನು ಕಿನ್ನಿಗೋಳಿಯಲ್ಲಿ ಬಸ್ನಿಂದ ಇಳಿಸದೇ ಎಲ್ಲ ಮಕ್ಕಳನ್ನು ಇಳಿಸಿದ ಅನಂತರ ಶಿಬರೂರು ರಸ್ತೆಯ ಬಳಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ದೂರು ಮೂಲ್ಕಿ ಠಾಣೆಯಲ್ಲಿ ದಾಖಲಾಗಿತ್ತು.
ಅಂದಿನ ಮೂಲ್ಕಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸ್ತುತ ಬಹ್ಮಾವರ ಠಾಣೆಯ ಇನ್ಸ್ಪೆಕ್ಟರ್ ಅನಂತಪದ್ಮನಾಭ ಅವರು ದೂರು ದಾಖಲಿಸಿಕೊಂಡು ಸಂಪೂರ್ಣ ತನಿಖೆಯನ್ನು ನಡೆಸಿ ಜಿಲ್ಲಾ ಫಾಸ್ಟ್ಟ್ರಾಕ್ ನ್ಯಾಯಾಲಯದಲ್ಲಿ ಆರೋಪಿಯ ಶಿಕ್ಷೆಗೆ ಕೇಸು ದಾಖಲಿಸಿಕೊಂಡಿದ್ದರು.