ಉಡುಪಿ, ಸೆ 06 (DaijiworldNews/SM): ಖಾಸಗಿವರ ಮನೆ ಮುಂದೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ವಿರೋಧ ಪಡಿಸಿದ್ದಕ್ಕೆ, ಪಂಚಾಯತ್ ಅಧ್ಯಕ್ಷ ಸದಸ್ಯ ಮತ್ತು ತಂಡ, ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆಗೈದ ಘಟನೆ ಸೋಮವಾರ ಉಡುಪಿಯ ಆತ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆ, ಆತ್ರಾಡಿಯ ಆರತಿ. ಆರತಿ ಕುಟುಂಬಕ್ಕೆ ಸೇರಿದ ಪಟ್ಟಾ ಜಾಗದಲ್ಲಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ವಿಚಾರಕ್ಕೆ ಪಂಚಾಯತ್ ಅಧ್ಯಕ್ಷ ರು, ಸದಸ್ಯರು ಮತ್ತು ಕುಟುಂಬವೊಂದರ ನಡುವೆ ಜಟಾಪಟಿ ನಡೆದು, ಮಾತಿಗೆಮಾತು ಬೆಳೆದು, ಆರತಿಯವರನ್ನು ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿಯಿಂದ ದೂಡಿದ ರಭಸಕ್ಕೆ ತಲೆಗೆ ಪೆಟ್ಟಾಗಿದ್ದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಹಿರಿಯಡ್ಕ ಫೋಲಿಸ್ ಠಾಣೆಯಲ್ಲಿ ಆರತಿಯವರ ದೂರಿನಂತೆ, ರತ್ನಾ ಕರ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮತ್ತು ಸಂತೋಷ್ ಪೂಜಾರಿಯವರು ಆರತಿ ಸುರೇಶ್ ಶೆಟ್ಟಿ (45) ಯವರ ಮನೆಯ ಮುಂಭಾಗದಲ್ಲಿ ಅತ್ರಾಡಿ ಗ್ರಾಮ ಪಂಚಾಯಿತಿ ವತಿಯಿಂದ ಕಾಂಕ್ರೀಟ್ ರಸ್ತೆಯನ್ನು ಮಾಡುವ ಸಲುವಾಗಿ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿರುತ್ತಾರೆ. ಆಗ ಆರತಿಯವರು ಪ್ರಶ್ನೆ ಮಾಡಿದಾಗ ಅವಾಚ್ಯ ಶಬ್ದಗಳಿಂದ ಬೈದು ಕೊಡೆಯಿಂದ ಹಲ್ಲೆ ಮಾಡಿರುತ್ತಾರೆ. ಅಲ್ಲದೆ ಮೂರೂ ಜನ ಸೇರಿಕೊಂಡು ಆರತಿಯನ್ನು ನೆಲಕ್ಕೆ ತಳ್ಳಿದ ಪರಿಣಾಮ ಹಣೆ ಕಲ್ಲಿಗೆ ತಾಗಿ ಗಾಯ ಉಂಟಾಗಿರುತ್ತದೆ. ಎಡಕೈಯನ್ನು ಬಲವಾಗಿ ಎಳೆದಾಡಿದ ಕಾರಣ ಎಡಕೈಯ ಮೂಳೆಮುರಿತ ಉಂಟಾಗಿ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಸಂದರ್ಭದಲ್ಲಿ ಗಲಾಟೆ ತಡೆಯಲು ಬಂದ ಆರತಿಯ ಪತಿ ಸುರೇಶ್ ಶೆಟ್ಟಿ ಮತ್ತು ಮಗಳ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಕೇಸಿನಲ್ಲಿ ದಾಖಲಿಸಿದ್ದಾರೆ.
ಈ ಸಂಬಂಧ, ಚಂದ್ರಹಾಸ ಶೆಟ್ಟಿಯವರು, ಆತ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರತ್ನಾಕರ್ ಶೆಟ್ಟಿಯವರ ಮೇಲೂ ಆರತಿಯವರ ಕುಟುಂಬದವರು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹಿರಿಯಡ್ಕ ಠಾಣೆಯಲ್ಲಿ ಪ್ರತ್ಯಾರೋಪ ಮಾಡಿದ್ದಾರೆ.