ಮಂಗಳೂರು, ಸೆ 06 (DaijiworldNews/HR): ಬಿಜೆಪಿ ಸರಕಾರ ಡಬಲ್ ಇಂಜಿನ್ ಅಲ್ಲ, ಡಬಲ್ ಧೋಖಾ (ಮೋಸ) ಸರಕಾರ ಎಂದು ಕಾಂಗ್ರೆಸ್ನ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರಧಾನಿ ಮೋದಿಯವರ ಭೇಟಿ ತಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯದ ಕಾರಣ ಸಾರ್ವಜನಿಕರು ಡಬಲ್ ಎಂಜಿನ್ ಸರ್ಕಾರದ ಬಗ್ಗೆ ನಿರಾಶೆಗೊಂಡಿದ್ದಾರೆ. ಇದು ಡಬಲ್ ಧೋಖಾ ಸರ್ಕಾರ ಎಂದು ಪಕ್ಷದ ಕಾರ್ಯಕರ್ತರು ಅರಿತುಕೊಂಡಿದ್ದಾರೆ ಎಂದರು.
ಮೋದಿಯವರ ಭೇಟಿಯ ಸಂದರ್ಭದಲ್ಲಿ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು, ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಘೋಷಣೆ ಸೇರಿದಂತೆ ಇತರ ಬೇಡಿಕೆಗಳು ಇದ್ದು, ಇದಕ್ಕೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಇಲ್ಲಿನ ಸಾರ್ವಜನಿಕರಿಗೆ ನಿರಾಸೆ ತಂದಿದೆ. ಬಿಜೆಪಿಯವರು ಪ್ರತಿ ಬಾರಿಯೂ ಶ್ರೀ ನಾರಾಯಣ ಗುರುಗಳನ್ನು ಅವಮಾನಿಸುತ್ತಾರೆ ಎಂದಿದ್ದಾರೆ.
ಶ್ರೀನಾರಾಯಣ ಗುರು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದಾಗ ಸಚಿವ ಸುನೀಲ್ ಕುಮಾರ್ ಪತ್ರ ಬರೆದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ಶ್ರೀ ನಾರಾಯಣ ಗುರುಗಳ ಹೆಸರನ್ನು ಹೇಳಿಕೊಂಡು ಮತ ಕೇಳುತ್ತಾರೆ ಆದರೆ ಅನ್ಯಾಯದ ಸಂದರ್ಭದಲ್ಲಿ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಎಂದು ಆರೋಪಿಸಿದ್ದಾರೆ.
75 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಪ್ರಶ್ನಿಸುತ್ತದೆ. ಆದರೆ ಬಿಜೆಪಿಯವರು ಕಾಂಗ್ರೆಸ್ ಕಟ್ಟಿದ್ದನ್ನೆಲ್ಲ ಮಾರುತ್ತಿದೆ ಎಂಬುದು ಎಲ್ಲರಿಗೂ ಕಾಣುವಂತದ್ದು ಎಂದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಏನನ್ನೂ ಮಾಡಿಲ್ಲ. ಅತಿವೃಷ್ಟಿಯಿಂದ ಮೂಲಸೌಕರ್ಯ, ಬೆಳೆ ಹಾಗೂ ರಸ್ತೆಗಳ ನಷ್ಟವಾಗಿದೆ. ಬಿಜೆಪಿಯವರು ನಮ್ಮ ರಾಜ್ಯವನ್ನು ತುಳಿಯುತ್ತಿದ್ದಾರೆ. ದೋಷಪೂರಿತ ಆರ್ಥಿಕ ನೀತಿಗಳಿಂದಾಗಿ ಬಿಜೆಪಿ ಕೇವಲ ಕಮಿಷನ್ ಗಳಿಕೆಯಲ್ಲಿ ಆಸಕ್ತಿ ವಹಿಸುತ್ತಿದೆ ಎಂದಿದ್ದಾರೆ.
ಇನ್ನು ಬಿಜೆಪಿ ನಾಯಕರೇ ತಮ್ಮದೇ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಎಬಿವಿಪಿ ಗೃಹ ಸಚಿವರ ನಿವಾಸಕ್ಕೆ ಘೇರಾವ್ ಮಾಡಲು ಯತ್ನಿಸಿದಾಗ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಎಂಎಲ್ ಸಿ ಮಂಜುನಾಥ್ ಭಂಡಾರಿ, ಮಾಜಿ ಎಂಎಲ್ ಸಿ ಐವನ್ ಡಿ ಸೋಜಾ, ಮಾಜಿ ಶಾಸಕರಾದ ರಮಾನಾಥ್ ರೈ, ಮೊಹಿಯುದ್ದೀನ್ ಬಾವ, ಜೆ ಆರ್ ಲೋಬೋ, ಕಾಂಗ್ರೆಸ್ ಮುಖಂಡರಾದ ಶಾಲೆಟ್ ಪಿಂಟೋ, ಎ ಸಿ ವಿನಯರಾಜ್, ಮಧು ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.