ಮಂಗಳೂರು, ಸೆ 06 (DaijiworldNews/MS): ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಚುನಾವಣೆ ಸೆ. 9ಕ್ಕೆ ನಿಗದಿಯಾಗಿದೆ. ಬಿಜೆಪಿ ಬಹುಮತ ಇರುವ ಪಾಲಿಕೆ ಆಡಳಿತದಲ್ಲಿ ಮುಂದಿನ ಮೇಯರ್ ಗಾದಿ ಮತ್ತೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿರುವ ಕಾರಣ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದ್ದು, ಆಕಾಂಕ್ಷಿಗಳ ತೆರೆಮರೆ ಕಸರತ್ತು ಜೋರಾಗಿದೆ.
ಇನ್ನೊಂದೆಡೆ ಇಂದು ಹೊಸ ಮೇಯರ್ ಆಯ್ಕೆಗೆ ಬಿಜೆಪಿಯ ಮಹತ್ವದ ಸಭೆ ನಡೆಯುವ ಸಾಧ್ಯತೆಯೂ ಇದೆ. ಇದೇ ಸಭೆಯಲ್ಲಿ ಹೊಸ ಮೇಯರ್ ಆಯ್ಕೆಗೆ ಪ್ರಾರಂಭಿಕ ತೀರ್ಮಾನ ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಪಾಲಿಕೆಯ ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮೊದಲ ಅವಧಿಯಲ್ಲಿ ಬಿಜೆಪಿಯ ದಿವಾಕರ್ ಪಾಂಡೇಶ್ವರ ಮೇಯರ್ ಗದ್ದುಗೆಗೇರಿದರೆ, ಎರಡನೇ ಅವಧಿಗೆ ಸಾಮಾನ್ಯ ಮೀಸಲು ನಿಗದಿಯಾದ ಕಾರಣ ಯಾವುದೇ ಜಿದ್ದಾಜಿದ್ದಿ ಇಲ್ಲದೆ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿಗೆ ಮೇಯರ್ ಹುದ್ದೆ ಒಲಿದು ಬಂದಿತ್ತು. ಇದೀಗ ಮೂರನೇ ಅವಧಿಯ ಮೀಸಲಾತಿಯೂ ಸಾಮಾನ್ಯ ಅಭ್ಯರ್ಥಿಗೆ ನಿಗದಿಯಾದ ಕಾರಣ ಬಿಜೆಪಿಯ ಕೆಲವರು ಗದ್ದುಗೆ ಏರಲು ಪ್ರಭಾವ ಬೀರುತ್ತಿದ್ದಾರೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮೇಯರ್ ಹುದ್ದೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಹೀಗಾಗಿ ರಾಜಕೀಯ ಅನುಭವ, ಪಾಲಿಕೆ ಆಡಳಿತದ ಪೂರ್ಣ ಹಿಡಿತ ಗೊತ್ತಿರುವವರಿಗೆ ಮುಂದಿನ ಮೇಯರ್ ಹುದ್ದೆ ಸಿಗುವ ಸಾಧ್ಯತೆಯಿದೆ. ಇದಕ್ಕಾಗಿ ಅನುಭವಿ ಕಾರ್ಪೋರೆಟರ್ಗಳ ಹೆಸರು ಮೇಯರ್ ಹುದ್ದೆಗೆ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.