ವಿಶೇಷ ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಸೆ 05 (DaijiworldNews/HR): ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ನಲ್ಲೂರು ಪುಚ್ಚಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಬದಿಯ ಗೋಡೆ ಬಿರುಕು ಬಿಟ್ಟಿದೆ. ಶಾಲಾ ಕಟ್ಟಡ ಅಪಾಯ ಸ್ಥಿತಿಯಲ್ಲಿ ಇರುವ ಕಾರಣದಿಂದಾಗಿ ಟರ್ಪಾಲು ಹೊದಿಸಲಾಗಿರುವ ಬಯಲುರಂಗವೇದಿಕೆಯನ್ನು ತಾತ್ಕಾಲಿಕವಾಗಿ ತರಗತಿಯನ್ನಾಗಿ ಮಾರ್ಪಾಡು ಮಾಡಲಾಗಿದೆ.
ಕಾರ್ಕಳ ತಾಲೂಕು ವ್ಯಾಪ್ತಿಯ ಬಜಗೋಳಿ- ಹೊಸ್ಮಾರು ರಾಜ್ಯ ಹೆದ್ದಾರಿಯ ನಲ್ಲೂರು ಚೆಂಡೆಬಸದಿಯ ಪ್ರಮುಖ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ದೂರದಲ್ಲಿ ಕಾಣಸಿಗುವ ಗ್ರಾಮೀಣ ಪ್ರದೇಶದ ಶಾಲೆ ಪುಚ್ಚಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಗತಿ ಇದಾಗಿದೆ.
1955ರಲ್ಲಿ ಆರಂಭಗೊಂಡ ಪುಚ್ಚಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯಲ್ಲಿ ಪ್ರಸ್ತುತ ಒಟ್ಟು 33 ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಅವರಲ್ಲಿ 21 ಮಂದಿ ಹುಡುಗರು, 12 ಮಂದಿ ಹುಡುಗಿಯರು ಇದ್ದಾರೆ. ಸರಕಾರಿ ಅದೇಶದಂತೆ ಒಟ್ಟು ನಾಲ್ಕು ಶಿಕ್ಷಕರ ಹುದ್ದೆಗಳಿದ್ದು, ಮೂವರು ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2 ಎಕರೆ ಜಾಗ ಹೊಂದಿರುವ ಈ ಶಾಲೆಯಲ್ಲಿ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಒಟ್ಟು ನಾಲ್ಕು ಕೋಣೆಗಳು ಶಾಲಾಕಟ್ಟಡದಲ್ಲಿ ಇತ್ತಾದರೂ, ಶಿಥಿಲವಸ್ಥೆಯಲ್ಲಿ ಇದ್ದ ಎರಡು ಕೋಣೆಗಳನ್ನು ಕಳೆದ ಒಂದು ತಿಂಗಳ ಹಿಂದೆಯಷ್ಟೇ ನೆಲೆಸಮಗೊಳಿಸಲಾಗಿತ್ತು.
ಇದಾದ ಬೆನ್ನಲ್ಲೇ ಮತ್ತೊಂದು ದಿಕ್ಕಿನಲ್ಲಿ ಇದ್ದ ಒಂದು ಕೋಣೆಯ ನಾಲ್ಕು ದಿಕ್ಕುಗಳ ಗೋಡೆಯು ಬಿರುಕು ಬಿಟ್ಟಿದ್ದು, ಅಪಾಯದ ಅಂಚಿನಲ್ಲಿದೆ. ಇಡೀ ಕಟ್ಟಡವು ಅಪಾಯಸ್ಥಿತಿಯಲ್ಲಿದ್ದ ಇದರ ಮುನ್ಸೂಚನೆ ಅರಿತುಕೊಂಡ ಶಿಕ್ಷಣ ಇಲಾಖೆಯು ಶಾಲಾ ರಂಗವೇದಿಕೆಯನ್ನುವಿದ್ಯಾರ್ಥಿಗಳ ತರಗತಿಯನ್ನಾಗಿ ಮಾರ್ಪಾಡು ಮಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಪುಚ್ಚಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಠ್ಯದೊಂದಿಗೆ ಪಾಠೇತರ ಚಟುವಟಿಕೆ ನಡೆಸುವ ಸಲುವಾಗಿ ಸಾರ್ವಜನಿಕ ಸಂಘ ಸಂಸ್ಥೆಯೊಂದಿಗೆ ಕೆಲ ವರ್ಷಗಳ ಹಿಂದೆ ಬಯಲು ರಂಗ ಮಂದಿರವನ್ನು ನಿರ್ಮಿಸಲಾಗಿತ್ತು. 2013-14ನೇ ಸಾಲಿನಲ್ಲಿ ತಾಲೂಕು ಪಂಚಾಯತ್ನ ರೂ. 30,000,13ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 50,000 ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರೂ.೩೦,೦೦೦ ಮೊತ್ತವನ್ನು ಕ್ರೋಡಿಕರಿಸಿ ಬಯಲು ರಂಗಮಂದಿರವನ್ನು ನಿರ್ಮಿಸಲಾಯಿತು.
ಪ್ರಸ್ತುತ ವೇದಿಕೆಯ ಮೇಲ್ಚಾವಣೆ ಸಂಪೂರ್ಣ ಸೋರಿಕೆಯಾಗುತ್ತಿರುವುದರಿಂದ ಅದರ ಮೇಲ್ಭಾಗದಲ್ಲಿ ಟರ್ಪಾಲನ್ನು ಹೊದಿಸಲಾಗಿದೆ. ಭಾರೀ ಮಳೆಗೆ ತಾತ್ಕಾಲಿಕವಾಗಿ ಕಾರ್ಯಚರಿಸುತ್ತಿರುವ ಈ ತರಗತಿಯೊಳಗೆ ಮಳೆ ನೀರು ಸೋರಿಕೆಯಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಇದೇ ವೇದಿಕೆಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದರಿಂದ ತಾತ್ಖಾಲಿಕ ತರಗತಿಯೊಳಗಿದ್ದ ಮೇಜು ಹಾಗೂ ಬೆಂಚುಗಳನ್ನು ಸ್ಥಳಾಂತರಗೊಳಿದರಿಂದ ವಿದ್ಯಾರ್ಥಿಗಳಿಗೆ ನೆಲದಲ್ಲಿ ಆಸೀನರಾಗಿ ಪಾಠ ಕಲಿಯುತ್ತಿದ್ದಾರೆ.
ಇನ್ನು ಶಾಲಾ ಹೊಸ ಕಟ್ಟಡ ನಿರ್ಮಾಣಕ್ಕೆ ಇಲಾಖೆಯಿಂದ ರೂ. 20 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಅದರ ಪ್ರಯುಕ್ತ ಶಾಲೆಯ ಎರಡು ಕೋಣೆಯಗಳನ್ನು ನೆಲಸಮಗೊಳಿಸಲಾಗಿದೆ. ವಿವೇಕ್ ಸ್ಕೂಲ್ ಯೋಜನೆಯಡಿ ರೂ. 13 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಈ ಎಲ್ಲಾ ಅನುದಾನಗಳನ್ನು ಕ್ರೋಡಿಕರಿಸಿ ಹಳೆಯದಾಗಿರುವ ಅಪಾಯದಂಚಿನಲ್ಲಿರುವ ಶಾಲಾ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡವೊಂದನ್ನು ನಿರ್ಮಿಸಿ ಎಲ್ಲಾ ತರಗತಿಯನ್ನು ಇದರಲ್ಲಿಯೇ ಆರಂಭಕ್ಕೆ ಚಂತನೆ ಕೈಗೊಳ್ಳಲಾಗಿದೆ.
ದಾನಿಗಳ ಆರ್ಥಿಕ ನೆರವು ದೊರಕಿದಲ್ಲಿ ಇದೇ ಶಾಲೆಯಲ್ಲಿ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಮೂಲಸೌಕರ್ಯ ದೊರಕಲಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಗೀತಾ ಹೇಳಿದ್ದಾರೆ.
ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರಿ ಅನುದಾನ ಬಿಡುಗಡೆಗೊಂಡಿದ್ದು,ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಮೂಲ ಸೌಕರ್ಯ ಒದಗಿಸುವ ಜೊತೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಇಲಾಖೆ ಬದ್ಧ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಹೇಳಿದ್ದಾರೆ.