ಕಾರ್ಕಳ, ಸೆ 05 (DaijiworldNews/MS): ನಗರ ವಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಎಲ್ಲೆ ಮೀರಿದ್ದು, ನಾಗರಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಕುರಿತು ಪುರಸಭೆಯ ಕಳೆದ ಎರಡು ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ವಿಚಾರ ಪ್ರಸ್ತಾಪಿಸಿದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಪುರಸಭಾ ಆಡಳಿತ ವರ್ಗ ಸಂಪೂರ್ಣವಾಗಿ ವಿಫಲಗೊಂಡಿದೆ.
ಕಳೆದ ಜನವರಿಯಿಂದ ಜುಲೈವರೆಗಿನ ಆರೋಗ್ಯ ಇಲಾಖೆಯ ಅಂಕಿ ಅಂಶದ ಪ್ರಕಾರ ಪುರಸಭೆ ವ್ಯಾಪ್ತಿಯಲ್ಲಿ 53 (ಪುರುಷರು:15 + ಮಹಿಳೆಯರು: 38) ಜನರಿಗೆ ಹುಚ್ಚು ನಾಯಿ ಕಡಿತವಾಗಿದೆ. ಅಲ್ಲದೆ 462 ಇತರ ನಾಯಿ ಕಡಿತ ಪ್ರಕರಣ ಕೂಡಾ ಇದೆ. ಬೀದಿ ನಾಯಿಗಳ ಆರ್ಭಟದಿಂದ ಮತ್ತಷ್ಟು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾತ್ರವಲ್ಲದೇ ಕೆಲವು ಬೈಕ್ ಸವಾರರು ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿರುತ್ತದೆ.
ಕ್ಯಾಚರ್ಸ್ ಕೊರತೆ:
ಸಂತಾನ ಹರಣ ಚಿಕಿತ್ಸೆಗಾಗಿ ಬೆಂಗಳೂರಿನ ವೈದ್ಯರು ಆಗಮಿಸಲಿದ್ದಾರೆ. ಆದರೆ ನಾಯಿಗಳನ್ನು ಹಿಡಿದು ಕೊಡಬೇಕಾಗುತ್ತದೆ. ಇದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪ್ರಸ್ತುತ ಶಿವಮೊಗ್ಗದಿಂದ ಪ್ರತ್ಯೇಕ ತಂಡ ಈ ಕಾಯಕ(ಡಾಗ್ ಕ್ಯಾಚರ್ಸ್)ವನ್ನು ನಿರ್ವಹಿಸುತ್ತಿದ್ದು, ಅವರನ್ನೇ ಹೊಂದಿಕೊಳ್ಳಬೇಕಾಗಿದೆ. ಸರಕಾರದಿಂದ ಒಂದು ನಾಯಿ ಸಂತಾನಹರಣ ಚಿಕಿತ್ಸೆಗೆ 2000ರೂ. ನೀಡುತ್ತಿದೆ. ವೈದ್ಯರ ವೆಚ್ಚ ಸೇರಿದಂತೆ ಎಲ್ಲಾ ಖರ್ಚನ್ನು ಇದೇ ಸಹಾಯ ನಿಧಿಯಿಂದ ನಿರ್ವಹಿಸಬೇಕಾಗಿದೆ. ಅದರಲ್ಲೂ ಇದೀಗ ಮಳೆಗಾಲ ಬೇರೆ. ಈ ತಂಡ ಆಗಮಿಸಿದ ಸಂದರ್ಭ ದಿನಕ್ಕೆ ಕನಿಷ್ಟ ೫೦ ನಾಯಿಗಳಾದರೂ ಬೇಕಾಗುತ್ತದೆ. ಇಲ್ಲವಾದಲ್ಲಿ ಆ ತಂಡದ ಖರ್ಚನ್ನು ವಿನಾ ಕಾರಣ ಭರಿಸಬೇಕಾಗುತ್ತದೆ. ಇದು ಕೂಡಾ ಒಂದು ಗಂಭೀರ ಪ್ರಶ್ನೆಯಾಗಿದೆ. ಇದರಿಂದ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಅಡ್ಡಿಯಾಗಿ ಪರಿಣಮಿಸಿದೆ.
ಟೆಂಡರ್ನಲ್ಲಿ ಪಾಲ್ಗೊಂಡ ಸರಕಾರಿ ಅರೆ ನೌಕರ
ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸುವುದಕ್ಕೆ ಕಾರ್ಕಳ ಪುರಸಭೆ ಟೆಂಡರ್ ಕರೆದಿದೆ. ಈ ಪ್ರಕ್ರಿಯೆಯಲ್ಲಿ ಸರಕಾರಿ ಅರೆ ನೌಕರ ವೈದ್ಯರೊಬ್ಬರು ಪಾಲ್ಗೊಂಡಿದ್ದಾರೆಂಬ ಮಾಹಿತಿ ಲಭಿಸಿದೆ.
ಕ್ರಮ ಕೈಗೊಳ್ಳಲಾಗುತ್ತದೆ
"ಬೀದಿ ನಾಯಿಗಳ ಸಮಸ್ಯೆಯನ್ನು ನೀಗಿಸುವಲ್ಲಿ ಪುರಸಭೆ ಕ್ರಮ ಕೈಗೊಳ್ಳಲಿದೆ. ಅದಕ್ಕೆ ಪೂರಕವಾದ ಎಲ್ಲಾ ಪೂರ್ವ ತಯಾರಿಯನ್ನು ನಡೆಸಿದ್ದೇವೆ. ಶೀಘ್ರದಲ್ಲಿಯೇ ಈ ಸಮಸ್ಯೆಗೊಂದಿ ಅಂತಿಮ ಪರಿಹಾರ ಸಿಗಲಿದೆ." -ಲೈಲಾ ಥೋಮಸ್ ( ಆರೋಗ್ಯ ಪರಿವೀಕ್ಷಕಿ, ಪುರಸಭೆ ಕಾರ್ಕಳ)
" ಕಳೆದ ಆರು ತಿಂಗಳಿನಿಂದ ಬೀದಿ ನಾಯಿಗಳ ಸಮಸ್ಯೆಗಳ ಬಗ್ಗೆ ಪುರಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಸಾರ್ವಜನಿಕರಿಂದ ಬಾರೀ ದೂರುಗಳಿರುವ ಹಿನ್ನೆಲೆಯಲ್ಲಿ ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು". ಅಶ್ಪಕ್ ಅಹ್ಮದ್ (ಸದಸ್ಯರು, ಪುರಸಭೆ ಕಾರ್ಕಳ)