ಉಡುಪಿ, ಸೆ 04 (DaijiworldNews/DB): ಮದ್ಯದ ಅಮಲಿನಲ್ಲಿ ಕಾರನ್ನು ಹಿಮ್ಮುಖವಾಗಿ ಚಾಲನೆ ಮಾಡಿ ವ್ಯಕ್ತಿಯೋರ್ವನಿಗೆ ಹಾಗೂ ಕಾರುಗಳಿಗೆ ಜಖಂಗೊಳಿಸಿದ ಆರೋಪದ ಮೇಲೆ ಕಾರು ಚಾಲಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆಪ್ಟಂಬರ್ 3ರಂದು ಇನ್ನೋವಾ ಕಾರಿನಲ್ಲಿ ಬ್ಯಾರೆಲ್ ಪಬ್ಗೆ ಗ್ರಾಹಕನಾಗಿ ಬಂದಿದ್ದ ಸುಹಾಸ್ ಎಂಬಾತ ಪಬ್ನಿಂದ ಹೊರ ಹೋಗುವಾ ಕುಡಿದ ಮತ್ತಿನಲ್ಲಿ ತನ್ನ ಕಾರನ್ನು ನಿರ್ಲಕ್ಷ್ಯತನದಿಂದ ಹಿಮ್ಮುಖವಾಗಿ ಚಲಿಸಿದ್ದಾನೆ. ಈ ವೇಳೆ ಪಬ್ ನೌಕರ ಏಕಾಂತ್ ಎಂಬವರ ಕಾಲಿಗೆ ಗಾಯವಾಗಿದ್ದು, ಪಾರ್ಕಿಂಗ್ನಲ್ಲಿದ್ದ ಫಾರ್ಚೂನರ್ ಮತ್ತು ಇತರ ಕಾರುಗಳಿಗೆ ಹಾನಿ ಉಂಟಾಗಿದೆ. ಕೆಎ 20 ಎಂಇ 0304 ಕಾರು ಮತ್ತುಕೆಎ 02 ಎಂಎನ್ 1589 ಕಾರುಗಳು ಜಖಂಗೊಂಡಿವೆ. ಈ ಸಂಬಂಧ ಪಾರ್ಚೂನರ್ ಕಾರು ಚಾಲಕ ರೋಶನ್ ಎಂಬವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕಾರು ಚಾಲಕ ಸುಹಾಸ್ನನ್ನು ವಶಕ್ಕೆ ಪಡೆಯಲಾಯಿತು.
ಪೊಲೀಸರು ಸುಹಾಸ್ನನ್ನು ತಪಾಸಣೆಗೊಳಪಡಿಸಿದ್ದು, ಈ ವೇಳೆ ಆತ ಮದ್ಯ ಸೇವಿಸಿ ಚಾಲನೆ ಮಾಡಿರುವುದು ದೃಢಪಟ್ಟಿದೆ. ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಪರೀಕ್ಷೆಗೊಳಪಡಿಸಲಾಗಿದೆ. ಆತನ ಸ್ನೇಹಿತರಾದ ಭರತ್, ನವೀನ್, ಕಲ್ಯಾಣ್, ನಿರ್ಮಲ, ಕವನಾ ಎಂಬವರನ್ನು ಕೂಡಾ ಪರೀಕ್ಷೆಗೊಳಪಡಿಸಲಾಗಿದೆ. ಇವರೆಲ್ಲರೂ ಬೆಂಗಳೂರು ಮತ್ತು ಶಿವಮೊಗ್ಗ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು, ರಾತ್ರಿ ಬ್ಯಾರೆಲ್ ಪಬ್ಗೆ ಭೇಟಿ ನೀಡಿದ್ದರು ಎನ್ನಲಾಗಿದೆ.