ಕೋಟ, ಫೆ 6 (MSP): ಕ್ಷುಲಕ ಕಾರಣಕ್ಕಾಗಿ ಇಬ್ಬರು ಯುವಕರು ಕೊಲೆಯಾದ ಘಟನೆ ಜ. 26ರಂದು ಕೋಟ ಸಮೀಪ ಚಿಕ್ಕನಕೆರೆಯಲ್ಲಿ ನಡೆದಿದ್ದು, ಇದೀಗ ಈ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನುವ ಸುದ್ದಿ ಸೋಮವಾರ ಕೇಳಿಬಂದಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಪೊಲೀಸರುಈ ವಿಚಾರವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ಯತೀಶ್ ಕಾಂಚನ್, ಭರತ್ ಶ್ರಿಯಾನ್ ಎನ್ನುವ ಯುವಕರ ಬರ್ಬರ ಹತ್ಯೆಯಾಗಿದ್ದು, ರಾಜಶೇಖರ ರೆಡ್ಡಿ, ಚಂದ್ರಶೇಖರ ರೆಡ್ಡಿ ಹಾಗೂ ಇತರ ನಾಲ್ವರು ಪ್ರಕರಣದ ಆರೋಪಿಗಳು ಎಂದು ಪ್ರಕರಣ ದಾಖಲಾಗಿತ್ತು ಮತ್ತು ಆರೋಪಿಗಳ ಬಂಧನ ವಿಳಂಬವಾದ ಬಗ್ಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಫೆ.3ರಂದು ಸ್ವಯಂಪ್ರೇರಿತ ಕೋಟ ಬಂದ್ ನಡೆದಿತ್ತು. ಫೆ.6ರೊಳಗೆ ಪ್ರಮುಖ ಆರೋಪಿಗಳನ್ನು ಬಂಧಿಸದಿದ್ದರೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದರು.
ಪೊಲೀಸರು ವ್ಯಾಪಕ ಶೋಧ ನಡೆಸಿ ತುಮಕೂರಿನ ಸಮೀಪ ಶಿರಾದಲ್ಲಿ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ತನಿಖೆಯ ದೃಷ್ಟಿಯಿಂದ ಬಹಿರಂಗಪಡಿಸುತ್ತಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದಾಗ, ಇದೊಂದು ಗಾಳಿ ಸುದ್ದಿಯಾಗಿದ್ದು ಯಾರನ್ನೂ ಬಂಧಿಸಲಾಗಿಲ್ಲ ಎಂದು ದೃಢಪಡಿಸಿದ್ದಾರೆ.