Karavali
ವಿಧಾನಸಭಾ ಚುನಾವಣೆ-2023 : ಎಲ್ಲರ ಚಿತ್ತ ಕಾಪು ವಿಧಾನಸಭಾ ಕ್ಷೇತ್ರದತ್ತ
- Sat, Sep 03 2022 08:50:26 PM
-
ವಿಶೇಶ ವರದಿ: ಹರ್ಷಿಣಿ ಉಡುಪಿ
ಉಡುಪಿ, ಸೆ 03 (DaijiworldNews/HR): 2023ರ ವಿಧಾನಸಭಾ ಚುನಾವಣೆಗೆ ಸರ್ವ ಸನ್ನದ್ಧ ವಾಗುತ್ತಿರುವ ಉಡುಪಿ ಜಿಲ್ಲೆ ಈ ಬಾರಿಯೂ ಬಿಜೆಪಿ ಮೇಲುಗೈ ಸಾಧಿಸಲು ಹಲವಾರು ಸಿದ್ಧತೆಗಳನ್ನು ಮಾಡುತ್ತಿದೆ. ಉಡುಪಿಯ ಐದು ಕಾಪು ವಿಧಾನಸಭಾ ಕ್ಷೇತ್ರಗಳು ಬೇರೆ ಬೇರೆ ವಿಚಾರದಲ್ಲಿ ಭಿನ್ನವಾಗಿದೆ. ಅದು ಕೇವಲ ಜನಸಂಖ್ಯೆಯಲ್ಲಿ ಮಾತ್ರ ಅಲ್ಲ, ಅಭಿವೃದ್ಧಿ ವಿಷಯದಲ್ಲಿ ಕೂಡ. ಬಿಜೆಪಿಯ ಪಾಲಿಗೆ ಈ ಕ್ಷೇತ್ರ ಮಾತ್ರ ಯುದ್ಧ ಗೆಲ್ಲುವ ಕ್ಷೇತ್ರವಾಗಿ ಕಾಣುತ್ತಿದೆ. ಈ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್ ನ ತೆಕ್ಕೆಗೆ ಜಾರುತ್ತಿದ್ದು, ಇತಿಹಾಸವೆಂಬಂತೆ 2018 ಮತ್ತೆ ಬಿಜೆಪಿಗೆ ಕ್ಷೇತ್ರದ ಜನತೆ ಗೆಲ್ಲಿಸಿದರು.
ಕಾಪುವಿನಲ್ಲಿ ಬಿಜೆಪಿಯ ಸ್ತಂಭ ನೆಟ್ಟವರು ಲಾಲಾಜಿ ಮೆಂಡನ್. ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಮರೀಚಿಕೆ ಆಗಿದ್ದ ಸಮಯದಲ್ಲಿ ಸೋಲುವ ಕುದುರೆ ಬೇಕಿತ್ತು. ಆಗ ಆ ಯುವನಾಯಕರಾಗಿದ್ದ ಲಾಲಾಜಿ ಸೂಕ್ತ ಎನಿಸಿತ್ತು, ತಳಮಟ್ಟದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದು ಬಿಜೆಪಿ ವಿಜಯ ಪತಾಕೆ ಹಾರಿಸಲು ಬಹಳ ಶ್ರಮ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಹೆಸರಿನ ಪ್ಲೇ ಕಾರ್ಡನ್ನು ಬಳಸಿ ಬಿಜೆಪಿ ಗೆಲ್ಲುತ್ತ ಬಂತು.
ತುಂಬಾ ಕುತೂಹಲಕರವಾದ ವಿಷಯವೆಂದರೆ, ಲಾಲಾಜಿಯಯವರಿಗೆ 2023 ರ ಚುನಾವಣೆಗೆ ಟಿಕೆಟ್ ಸಿಗುವುದೇ ಸಂಶಯ ಎನ್ನುವ ಕಾರಣಕ್ಕೆ ಈ ಕಾಪು ವಿಧಾನಸಭಾ ಕ್ಷೇತ್ರದ ಮೇಲೆ ಎಲ್ಲರು ಹದ್ದಿನ ಕಣ್ಣು ಇಟ್ಟಿದ್ದಾರೆ. ಕಳೆದ ಬಾರಿ 4-5 ಮಂದಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರೆ , ಈ ಬಾರಿ ಆಕಾಂಕ್ಷಿ ಹೆಚ್ಚು ಮಂದಿ ಇದ್ದಾರೆ. ಕಾಪು ಕ್ಷೇತ್ರದಲ್ಲಿ ಜಾತಿ ರಾಜಕೀಯ ಕೂಡ ಇದೆ. ಬಂಟರ ಸಂಖ್ಯೆ ಒಂದು ಕೈ ಮೇಲಿದ್ದರೆ, ಮೊಗವೀರ, ಬಿಲ್ಲವರು ಕೂಡ ಅಷ್ಟೇ ಮಂದಿ ಇದ್ದಾರೆ. ಇನ್ನು ಮುಸ್ಲಿಂ ಸಮುದಾಯದ ಸಂಖ್ಯೆ ಕೂಡ ಸ್ವಲ್ಪ ಮಟ್ಟಿಗಿದೆ.
2018 ಕ್ಕಿಂತ ಮೊದಲು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಕಾಪು ಈಗ ಬಿಜೆಪಿ ತೆಕ್ಕೆಗೆ ಸೇರಿದೆ. ಆದರೂ ಅಲ್ಲಿನ ಮಾಜಿ ಕಾಂಗ್ರೆಸ್ ಶಾಸಕರು ಜನ ಸಂಪರ್ಕವನ್ನು ಬಿಟ್ಟುಕೊಟ್ಟಿಲ್ಲ. ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ತಿತ್ವ ಇಲ್ಲದಿದ್ದರೂ, ವಿನಯ್ ಕುಮಾರ್ ಸೊರಕೆಯವರು ಇಂದಿಗೂ ಸಕ್ರಿಯ ರಾಜಕಾರಣಿ ಮತ್ತು ಲಾಲಾಜಿಯವರಿಗೆ ಪ್ರಬಲ ಎದುರಾಳಿ.
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಕಾಪು ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು.
ಇಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಲಾಲಾಜಿ ಮಂಡನ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆ 11917 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ಕಾಪು ಕ್ಷೇತ್ರದ ಇತಿಹಾಸ ತೆಗೆದುಕೊಂಡರೆ, ದಿವಂಗತ ವಸಂತ ವಿ. ಸಾಲ್ಯಾನ್ ಪ್ರಬಲ ಹಿಡಿತ ಹೊಂದಿದ್ದರು. ಸತತ ಐದು ಬಾರಿ ಈ ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿದ್ದರು. 1983, 85, 89, 94, 99ರಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದು ಸಾಲ್ಯಾನ್ ಇಲ್ಲಿ ಗೆಲುವಿನ ಬಾವುಟ ಹಾರಿಸುತ್ತಾ ಬಂದಿದ್ದರು.
2004 ರಲ್ಲಿ ಬಿಜೆಪಿ ಹಾರಿಸಿತು ವಿಜಯ ಪತಾಕೆ :
ಆದರೆ, 1994 ಮತ್ತು 1999ರಲ್ಲಿ ವಸಂತ ಸಾಲ್ಯಾನ್ ವಿರುದ್ಧ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿಯ ಲಾಲಾಜಿ ಮೆಂಡನ್ , 2004ರಲ್ಲಿ ಸಾಲ್ಯಾನ್ ರಿಗೆ ಕೇವಲ ಒಂದು ಸಾವಿರ ಮತಗಳಿಂದ ಸೋಲುಣಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ದಕ್ಕಿಸಿಕೊಟ್ಟರು.
ವಿಶೇಷ ಎಂದರೆ 2008ರಲ್ಲೂ ಇಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ ಕಾಂಗ್ರೆಸಿನ ವಸಂತ ವಿ ಸಾಲ್ಯಾನ್ ರನ್ನು ಅಲ್ಪ ಮತಗಳಿಂದ ಸೋಲಿಸಿದರಾದರೂ ಸಾಲ್ಯಾನ್ ಪ್ರಭಾವ ಕ್ಷೇತ್ರದಲ್ಲಿ ತಗ್ಗಿರಲಿಲ್ಲ.
2013ರಲ್ಲಿ ಇಲ್ಲಿ ಕಾಂಗ್ರೆಸ್ ವಸಂತ ಸಾಲಿಯಾನ್ ಗೆ ಟಿಕೆಟ್ ನೀಡದೆ ಅನುಭವಿ ರಾಜಕಾರಣಿ ವಿನಯ್ ಕುಮಾರ್ ಸೊರಕೆಯವರಿಗೆ ಟಿಕೆಟ್ ನೀಡಿತ್ತು. ಇಲ್ಲಿ ಸೊರಕೆ ನಿಂತಾಗ, ಇವರು ಸಚಿವರಾಗುತ್ತಾರೆ ಎಂದೇ ಕಾಂಗ್ರೆಸ್ ಮತಯಾಚನೆ ಮಾಡಿತ್ತು. ಅದರಂತೆಯೇ ಸೊರಕೆ ಸುಮಾರು ಒಂದೂವರೆ ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.
ಮತ್ತೊಂದು ಇಂಟೆಸ್ಟಿಂಗ್ ವಿಷಯ ಏನೆಂದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಆಗಿ ಕೆಲಸ ಮಾಡುತ್ತಿರುವುದರಿಂದ ಅದರ ಪ್ರಭಾವ ವಿಧಾನಸಭೆ ಕ್ಷೇತ್ರಗಳ ಮೇಲೆ ಬಿದ್ದೆ ಬೀಳುತ್ತೆ. ಮೋದಿಯ ಪ್ಲೇ ಕಾರ್ಡ್ ಬಳಸಿಕೊಂಡು ಯಾವೊಬ್ಬ ಹೊಸ ಆಕಾಂಕ್ಷಿಯನ್ನು ಅಭ್ಯರ್ಥಿ ಸ್ಥಾನದಲ್ಲಿ ನಿಲ್ಲಿಸಿದರೂ ಜಯ ಸಿಗುವುದು ಬಿಜೆಪಿಗೆ ಎನ್ನುವುದರಲ್ಲಿ ಸಂಶಯ ಇಲ್ಲ
ಕ್ಷೇತ್ರ ಒಂದು, ಆಕಾಂಕ್ಷಿಗಳು ?
ಕುಯ್ಲಾಡಿ ಸುರೇಶ್ ನಾಯಕ್ ಪ್ರಸ್ತುತ ಬಿಜೆಪಿ ಅಧ್ಯಕ್ಷರಾಗಿದ್ದು , ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಹಿರಿಯಡ್ಕ ಮೂಲದವರಾದ ಇವರು ಕಾಪು ವಿಧಾನಸಭಾ ಕ್ಷೇತ್ರವನ್ನು ತುಂಬಾ ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರು 1986 ರಿಂದ ಆರ್ಎಸ್ಎಸ್ ಸ್ವಯಂ ಸೇವಕರಾಗಿದ್ದಾರೆ. ನಾಯಕ್ 1989 ರಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ.1996ರಲ್ಲಿ ಉಡುಪಿ ಬಿಜೆಪಿಯ ಮಂಡಲ ಪ್ರಧಾನ ಕಾರ್ಯದರ್ಶಿ, 2005 ರಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾಗಿದ್ದ ನಾಯಕ್, 2008ರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, 2010ರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿದ್ದರು. 2011ರಲ್ಲಿ ಉಡುಪಿ ತಾಲೂಕು ಕೃಷಿ ಉತ್ಪಾದಕರ ಮಾರುಕಟ್ಟೆ ಸೊಸೈಟಿ ಸಮಿತಿ (ಎಪಿಎಂಸಿ) ಅಧ್ಯಕ್ಷರೂ ಆಗಿದ್ದರು. 2013ರಲ್ಲಿ ಬಿಜೆಪಿ ಕಾಪು ಮಂಡಲ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಸುರೇಶ್ ಶೆಟ್ಟಿ ಗುರ್ಮೆ, ಇವರು ಉಡುಪಿಯಾ ಖ್ಯಾತ ಉದ್ಯಮಿ, ಕೃಷಿಕ ಸದ್ಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.ಇವರು ಮೂಲತಃ ಬಿಜೆಪಿಗರಲ್ಲ. ಕಾಂಗ್ರೆಸ್ ನಿಂದ ಬಿಜೆಪಿಯ ದ್ವಜ ಪಡೆದು ಬಂದವರು. 2015ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಮುಖ ಮಾಡಿದರು. 2013 ರಲ್ಲಿ ಕಾಂಗ್ರೆಸ್ ನಿಂದ ಕಾಪು ಕ್ಷೇತ್ರದಲ್ಲಿ ಟಿಕೆಟ್ ಸಿಗುತ್ತದೆ ಎಂಬ ಅಪಾರವಾದ ನಿರೀಕ್ಷೆ ಇತ್ತು ಆದರೇ ಕೊನೆಗೆ ಹುಸಿಯಾಯ್ತು. ನಂತರ ಪಕ್ಷದವರೇ ಬದಿ ಸರಿಸಿದರು. ನಂತರ 2015 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿಯ ಉಪಾಧ್ಯಕ್ಷರಾಗಿದ್ದಉ ಕೆಲಸ ನಿರ್ವಹಿಸಿದ್ದಾರೆ. ರಾಜಕೀಯ ಹಾಗು ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಇವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.
ಯಶ್ ಪಾಲ್ ಸುವರ್ಣ ಹೆಸರು ಸಧ್ಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು. ಮೊಗವೀರ ಸಮುದಾಯದ ಯುವ ನಾಯಕರಲ್ಲಿ ಮೊದಲಿರಾಗಿ ಬಿಂಬಿತರಾಗುತ್ತಿದ್ದಾರೆ. ಕಳೆದ ಆರೇಳು ವರ್ಷದಿಂದ ಯಶ್ಪಾಲ್ ಆ ಭಾಗದಲ್ಲಿ ಸಕ್ರಿಯವಾಗಿದ್ದಾರೆ. ಮೂರು ಬಾರಿ ಅಜ್ಜರಕಾಡು ವಾರ್ಡ್ ನಿಂದ ಗೆದ್ದು ನಗರಸಭೆಯ ಕೌನ್ಸಿಲರ್ ಆಗಿದ್ದರು. ಪ್ರಸ್ತುತ ಮೀನುಗಾರ ಪ್ರಕೋಷ್ಠದ ರಾಜ್ಯ ಸಂಚಾಲಕರು, ರಾಜ್ಯ ಯುವ ಮೋರ್ಚಾದ ಕಾರ್ಯದರ್ಶಿ, ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಕಳೆದ 14 ವರ್ಷಗಳಿಂದ ದಕ್ಷಿಣ ಕನ್ನಡ ಮೀನು ಮಾರುಕಟ್ಟೆ ಫೆಡರೇಷನ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಎನ್ಎಂಪಿಟಿ ಬಂದರು ಮಂಡಳಿಯ ಟ್ರಸ್ಟಿ ಕೂಡ ಆಗಿದ್ದಾರೆ.
2018 ರಲ್ಲಿ ನಡೆದ ಚುನಾವಣೆಯಲ್ಲಿ ಕಾಪು ಕ್ಷೇತ್ರಕ್ಕೆ ಇವರ ಹೆಸರು ಅಂತಿಮ ಹಂತಕ್ಕೆ ಬಂದಿತ್ತು. 2018 ರ ಲೋಕಸಭಾ ಚುಣಾವಣೆಯಲ್ಲಿ ಅಮಿತ್ ಶಾಗೆ ಬೆಂಬಲವಾಗಿ ನಿಂತು ಕೆಲಸ ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ಭಜರಂಗದಳದ ಸಂಚಾಲಕರಾಗಿ, ಪಕ್ಷದ ಚಟುವಟಿಕೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ.
ಓರ್ವ ಸಾಮಾನ್ಯ ಕಾರ್ಯಕ್ರತನಾಗಿ , ಯಾವುದೇ ಕುಟುಂಬ ರಾಜಕಾರಣ ಹಿನ್ನೆಲೆಯಿಲ್ಲದೆ ರಾಜಕೀಯದಲ್ಲಿ ಬೆಳೆದು ಬಂದವರು. ಹಿಂದುತ್ವ, ಸಹಕಾರಿ ಕ್ಷೇತ್ರದಲ್ಲಿ, ಸ್ಥಳೀಯ ದೇವಾಲಯಗಳ ಧಾರ್ಮಿಕ ಕೈಂಕರ್ಯದಲ್ಲಿ ಮುಂದೆ ನಿಂತು ಸಹಕಾರವಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಿಜಾಬ್ ವಿವಾದವನ್ನು ತನ್ನ ದಿಟ್ಟತನದಿಂದ ನಿಭಾಯಿಸುವಲ್ಲಿ ಯಶಸ್ವಿಯಾದರು ಎನ್ನುವುದು ಮತ್ತೊಂದು ವಿಚಾರ. ಇವೆಲ್ಲ ಯಶ್ ಪಾಲ್ ಸುವರ್ಣರಿಗೆ ಪ್ಲಸ್ ಆಗುವ ಸಾಧ್ಯತೆ ಇದೆ.
ಗೀತಾಂಜಲಿ ಸುವರ್ಣ, ಮೂಲ ಬಿಜೆಪಿಗ ಅಲ್ಲವಾದರೂ ಬಿಜೆಪಿ ಪಕ್ಷ ಸೇರಿದ ನಂತರ ಪಕ್ಷ ನಿಷ್ಠರಾಗಿದ್ದವರು. ಹಂತ ಹಂತವಾಗಿ ಬೆಳೆದು ಪ್ರಸ್ತುತ ರಾಜ್ಯಕಾರ್ಯಕಾರಿಣಿ ಆಗಿ ಸದಸ್ಯರು, ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಉಡುಪಿ ಜಿಲ್ಲಾ ಪಂಚಾಯತ್ ಗೆ ಪಡುಬಿದ್ರಿ ಮತ್ತು ಕುರ್ಕಾಲು ಕ್ಷೆತ್ರದಿಂದ ಎರಡು ಬಾರಿ ಜಯಗಳಿಸಿ ಸದಸ್ಯರಾದರು. ಅಷ್ಟೇ ಅಲ್ಲದೆ ಧಾರ್ಮಿಕ , ಸಮಾಜ ಸೇವೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡವರು. ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರೊಂದಿಗೆ ಉತ್ತಮ ಸಂಪರ್ಕವಿದ್ದು , ಮಹಿಳಾ ಆಕಾಂಕ್ಷಿ ಪಟ್ಟಿಯಲ್ಲಿ ಇವರ ಹೆಸರು ಮೊದಲು ಬರುತ್ತದೆ.
ಇನ್ನು ಮಾಜಿ ಶಾಸಕ ದಿವಂಗತ ವಸಂತ್ ಸಾಲ್ಯಾನ್ ರವರ ಮಗಳು ಶಿಲ್ಪಿ ಜಿ ಸುವರ್ಣ ಕೂಡ ಬಿಜೆಪಿ ಕಾರ್ಯಕರ್ತರಾಗಿ ಮುಂಚೂಣಿಯಲ್ಲಿದ್ದಾರೆ. ಪ್ರಥಮ ಬಾರಿಗೆ ಜಿಲ್ಲಾ ಪಂಚಾಯತ್ ಗೆ ಎಲ್ಲೂರು ಕ್ಷೇತ್ರದಿಂದ ಗೆದ್ದು ಸ್ಥಾನ ಪಡೆದುಕೊಂಡರು. ಅಲ್ಲದೆ ಜಿಲ್ಲಾ ಬಿಜೆಪಿಯ ಉಪಧ್ಯಕ್ಷರು ಆಗಿದ್ದಾರೆ. ಅವರು ಕೂಡ ಶಾಸಕ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಒಬ್ಬರು ಅಂದರೆ ತಪ್ಪಿಲ್ಲ .
ಕಾಪು ಕ್ಷೇತ್ರದಲ್ಲಿ ಲಾಲಾಜಿಗೆ ಸವಾಲು ಹಾಕುವವರೇ ಇಲ್ಲವೆಂದಲ್ಲ. ಪಕ್ಷ ಸಂಘಟನೆಯಲ್ಲಿ ಯಾರು ಪ್ರಮುಖರಾಗಿರುತ್ತಾರೋ ಅವರಿಗೆ ಕೊಡುವ ಸಾಧ್ಯತೆ ಇದೆ. ಮುಖ್ಯವಾಗಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಇಷ್ಟಾಗ್ಯೂ ಕೊನೆಯಲ್ಲಿ ಇದಾವುದರ ಗೊಂದಲ, ಮನಸ್ತಾಪ, ಜಾತಿ, ಸಮುದಾಯದ ನಡುವೆ ಸಿಲುಕಿ ಹಾಕಿಕೊಳ್ಳುವುದು ಬೇಡ, ಇದ್ಯಾವುದರ ತೊಂದರೆ ಬೇಡ, ಲಾಲಾಜಿಯವರಿಗೆ ಕೊನೆಗೆ ಅಭ್ಯರ್ಥಿಯನ್ನಾಗಿಸಿ ಬಿಡೋಣ ಎಂದರೂ ಆಶ್ಚರ್ಯ ಪಡಬೇಕಾದಿಲ್ಲ. ರಾಜಕೀಯದಾಟದಲ್ಲಿ ಏನೂ ನಡೆಯಬಹುದು.