ಕುಂದಾಪುರ, ಸೆ 03 (DaijiworldNews/HR): ತಾಲೂಕಿನ ಗುಲ್ವಾಡಿ ಗ್ರಾಮ ಪಂಚಾಯತ್ನ ಸೌಕೂರು ಮತ್ತು ಕಾವ್ರಾಡಿ ಗ್ರಾಮ ಪಂಚಾಯತ್ ಸಾರ್ಕಲ್ ಭಾಗವನ್ನು ಬೆಸಯುವ ಸಾರ್ಕಲ್ ಸೇತುವೆ ನಿರ್ಮಾಣದ ಬೇಡಿಕೆ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಹಲವು ದಶಕಗಳ ಈ ಬೇಡಿಕೆ ಇನ್ನೂ ಕೂಡಾ ನನಸಾಗದ ಕನಸಾಗಿಯೇ ಉಳಿದಿದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆ ಹರಿಯುವ ನದಿ ದಾಟಿದರೆ ಸಾರ್ಕಲ್ ಸಿಗುತ್ತದೆ. ಇಲ್ಲಿ ನದಿಯ ಅಗಲ ಕೂಡಾ ಕಡಿಮೆಯಿದ್ದು ಸೇತುವೆ ನಿರ್ಮಾಣ ಆದರೆ ಎರಡು ಗ್ರಾಮಗಳು ಬೆಸೆದುಕೊಳ್ಳಲಿದೆ. ಮೊದಲೆಲ್ಲಾ ಇಲ್ಲಿ ಕಾಲು ಸಂಕ ನಿರ್ಮಾಣ ಮಾಡಿಕೊಳ್ಳಲಾಗುತ್ತಿತ್ತು. ಈಗ ಕಾಲುಸಂಕ ನಿರ್ಮಾಣ ಮಾಡುವ ಸಾಹಸಕ್ಕೆ ಮುಂದಾಗುತ್ತಿಲ್ಲ. ಸೌಕೂರು ಹಬ್ಬದ ಸಮಯಕ್ಕೆ ಜನ ಹಬ್ಬಕ್ಕೆ ಹೋಗಲು ತಾತ್ಕಾಲಿಕ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತಾರೆ.
ಹತ್ತು ವರ್ಷಗಳ ಹಿಂದೆ ಇಲ್ಲಿ ಕಾಲುಸಂಕ ನಿರ್ಮಾಣ ಮಾಡುತ್ತಿದ್ದರು. ಅದು ಮಳೆಗಾಲದಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಕಾಲುಸಂಕ ನಿರ್ಮಾಣವನ್ನು ಕೈಬಿಡಲಾಗಿದೆ. ಜನ ಸುತ್ತುಗಟ್ಟಿ ಹೋಗುವುದನ್ನು ರೂಡಿ ಮಾಡಿಕೊಂಡಿದ್ದಾರೆ.
ಇಲ್ಲಿ ಸೇತುವೆ ನಿರ್ಮಾಣವಾದರೆ ಈ ಎರಡು ಪ್ರದೇಶಗಳು ಅಭಿವೃದ್ದಿಯಾಗಲಿದೆ. ಸೌಕೂರಿನಿಂದ ಹೊಳೆಯ ತನಕ ರಸ್ತೆಯಿದೆ. ಆತ್ತ ಕಾವ್ರಾಡಿಯಿಂದ ಸಾರ್ಕಲ್ ಈ ಹೊಳೆಯ ಹತ್ತಿರದವರೆಗೂ ಡಾಂಬರೀಕೃತ ರಸ್ತೆಯಿದೆ. ಸೇತುವೆ ನಿರ್ಮಾಣಕ್ಕೆ ದೊಡ್ಡ ಆರ್ಥಿಕತೆಯ ಅವಶ್ಯಕತೆಯೂ ಇಲ್ಲ. ಸರ್ಕಾರ ಚುನಾಯಿತ ಪ್ರತಿನಿಧಿಗಳು ಮನಸ್ಸು ಮಾಡಿದರೆ ಎರಡು ಗ್ರಾಮಗಳನ್ನು ಬೆಸೆಯಬಹುದು.
ಸೇತುವೆಯಾದರೆ ಮುಖ್ಯವಾಗಿ ಕೃಷಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಾವ್ರಾಡಿ, ಸಾರ್ಕಲ್, ಮುಂಬಾರು ಭಾಗದವರು ಸೌಕೂರಿಗೆ ಬರಲು, ಹಾಲು ಉತ್ಪಾದಕರ ಸಂಘ, ಶಾಲೆ, ದೇವಸ್ಥಾನಕ್ಕೆ ಬರಲು ಅನುಕೂಲವಾಗುತ್ತದೆ. ಈಗ ಸೌಕೂರು ಭಾಗದ ಜನ ಸಾರ್ಕಲ್ಗೆ ಹೋಗಲು ಸೌಕೂರು ಕಂಡ್ಲೂರು ಸೇತುವೆಯ ಮೂಲಕವೇ ಹೋಗಬೇಕು. ಸಾರ್ಕಲ್ ಭಾಗದ ವಿದ್ಯಾರ್ಥಿಗಳು ಮಾವಿನಕಟ್ಟೆ ಹೈಸ್ಕೂಲ್ಗೆ ಬರಲು ಇಲ್ಲಿ ಸೇತುವೆಯಾದರೆ ಅನುಕೂಲವಾಗುತ್ತದೆ. ಹೀಗೆ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಈ ಸೇತುವೆಯಾಗುವುದು ಅವಶ್ಯಕತೆ ಇದೆ.
ಸೇತುವೆ ನಿರ್ಮಾಣದ ಬಗ್ಗೆ ಜನ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಅದು ಇನ್ನೂ ಈಡೇರಿಲ್ಲ. ಈ ಬಗ್ಗೆ ಜನರಲ್ಲಿ ನಿರುತ್ಸಾಹ ಮೂಡಿದೆ. ಎರಡು ಕಡೆ ತೀರಾ ಹಿಂದುಳಿದ ಗ್ರಾಮೀಣ ಪ್ರದೇಶಗಳೇ ಇರುವುದರಿಂದ ಸೇತುವೆಯಾದರೆ ಗ್ರಾಮಗಳು ಅಭಿವೃದ್ದಿ ಹೊಂದಲು ಅನುಕೂಲವಾಗುತ್ತದೆ. ಹಾಗಾಗಿ ಸಾರ್ಕಲ್ ಹೊಳೆಗೆ ಸೇತುವೆಯಾಗುವುದು ಅತ್ಯಂತ ತುರ್ತು ಅವಶ್ಯಕ ಎನ್ನುತ್ತಾರೆ ಜನತೆ.