ಮಂಗಳೂರು,ಫೆ 6 (MSP): ಮೀನು ವ್ಯಾಪಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ತಲುಪಿಸಲು ಮುಂಬೈನಿಂದ ತಂದಿದ್ದ 5 ಲಕ್ಷ ದರೋಡೆ ಮಾಡಲಾಗಿದೆ ಎಂದು ಗುಂಪೊಂದು ಕಂಕನಾಡಿ ನಗರ ಠಾಣೆಗೆ ದೂರು ನೀಡಿದೆ. ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಾಪು ಬಳಿ ಭಟ್ಕಳದ ಮೂವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯ ವಿವರ:
ನಗರದ ಕಂಕನಾಡಿ ರೈಲ್ವೆ ಜಂಕ್ಷನ್ ನಿಂದ ಬರುತ್ತಿದ್ದ ಪ್ರಯಾಣಿಕರನ್ನು ತಡೆಗಟ್ಟಿ 5 ಲಕ್ಷ ರೂ. ದರೋಡೆ ಮಾಡಿದ ಘಟನೆ ಮಂಗಳವಾರ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆಯ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ 4 ಮಂದಿಯ ತಂಡ ಮುಂಬಯಿಯಿಂದ ಮಂಗಳೂರಿಗೆ ಆಗಮಿಸಿದೆ. ಇವರಲ್ಲಿ ಮೀನುಗಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ 5 ಲಕ್ಷ ರೂ ಹಣವಿದ್ದು ಅದನ್ನು ನಗರದ ವ್ಯಕ್ತಿಯೊಬ್ಬರಿಗೆ ತಲುಪಿಸಬೇಕಿತ್ತು. ಆದರೆ ವ್ಯಕ್ತಿಯೊಬ್ಬರು ಕರೆ ಮಾಡಿ ನೀವು ರಿಕ್ಷಾದಲ್ಲಿ ಪಂಪ್ ವೆಲ್ ಕಡೆಗೆ ಬನ್ನಿ ಎಂದು ಹೇಳಿದ್ದಾರೆ. ಅದರಂತೆ ರಿಕ್ಷದಲ್ಲಿ ಬರುತ್ತಿದ್ದಾರ ಅಮರ್ ಆಳ್ವ ರಸ್ತೆ ಸಮೀಪ ತಾವೇರಾ ವಾಹನದಲ್ಲಿ ಬಂದ ನಾಲ್ವರ ತಂಡ ಏಕಾಏಕಿ ರಿಕ್ಷ ಅಡ್ಡಗಟ್ಟಿ 5 ಲಕ್ಷ ರೂ. ಹಣ ಬ್ಯಾಗನ್ನು ದೋಚಿ ಪರಾರಿಯಾಗಿದೆ.
ಪೊಲೀಸರಿಗೆ ಕರೆ: ದರೋಡೆ ಪ್ರಕರಣ ನಡೆದ ಕೆಲವೇ ಕ್ಷಣದಲ್ಲಿ ನಗರ ಠಾಣೆ ಪೊಲೀಸರಿಗೆ ಅನಾಮಿಕ ವ್ಯಕ್ತಿಯೊಬ್ಬ ಪೋನ್ ಕರೆ ಮಾಡಿ ತಂಡವೊಂದು 5 ಲಕ್ಷ ರೂ.ಹಣವನ್ನು ದರೋಡೆ ಮಾಡಿ ಕಾರಿನಲ್ಲಿ ಪರಾರಿಯಾಗಿದೆಂದು ಹೇಳಿದ್ದಾನೆ. ಕೂಡಲೇ ಪೊಲೀಸರು ನಗರ ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ. ಆದರೆ ಘಟನೆ ನಡೆದು ತುಂಬಾ ಹೊತ್ತಾದರೂ ಯಾರು ದೂರು ನೀಡಲು ಬರಲಿಲ್ಲ. ಬಳಿಕ ದರೋಡೆಗೊಳಗಾದ ತಂಡದ ವ್ಯಕ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ಆತನನ್ನು ವಿಚಾರವನ್ನು ನಡೆಸಿದಾಗ ಅಸ್ಪಷ್ಟ ಉತ್ತರ ಲಭಿಸಿದೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ದರೋಡೆ ಪ್ರಕರಣವನ್ನು ಗಂಬೀರವಾಗಿ ಅರಿತ ನಗರ ಪೊಲೀಸರು ಕೂಡಲೇ ಕಾರ್ಯಾಚರಣೆ ಆರಂಭಿಸಿದರು. ಪೊಲೀಸರು ಠಾಣೆಗೆ ಬಂದ ಮೊಬೈಲ್ ಕರೆಯನ್ನು ಆಧರಿಸಿ ಆದರ ನೆಟ್ ವರ್ಕ್ ಶೋಧ ನಡೆಸಿದಾಗ ಹೆಜಮಾಡಿಯಿಂದ ಉಡುಪಿಯತ್ತ ಕಾರು ತೆರಳುವುದು ಗಮನಕ್ಕೆ ಬಂದಿದೆ.
ನಗರ ಪೊಲೀಸರು ಕೂಡಲೇ ಉಡುಪಿ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತವೇರಾ ವಾಹನದ ತಪಾಸಣೆಗೆ ತೊಡಗಿ ಕಾಪು ಬಳಿ ವಾಹನವನ್ನು ತಡೆಹಿಡಿದು ವಾಹನ ಮತ್ತು 4 ಮಂದಿಯನ್ನು ವಶಕ್ಕೆ ಪಡೆದು ಮಂಗಳೂರು ನಗರ ಪೊಲೀಸರಿಗೆ ಹಸ್ತಾಂತರಿಸಿದರು.
ರೈಲಿನಲ್ಲಿ ಬಂದ 4 ಮಂದಿ ಪ್ರಯಾಣಿಕರು, ಹಿಂದಿ ಮಾತನಾಡುತ್ತಿದ್ದು, ಮಹಾರಾಷ್ಟದವರಾಗಿರಬಹುದೆಂದು ಸಂಶಯಿಸಲಾಗಿದೆ. ಉಡುಪಿಯಲ್ಲಿ ಸೆರೆಯಾದ 4 ಮಂದಿ ಕೂಡಾ ಭಟ್ಕಳದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಈ ಘಟನೆ ಪೊಲೀಸರಲ್ಲಿ ಕೆಲವೊಂದು ಅನುಮಾನಗಳನ್ನು ಹುಟ್ಟುಹಾಕಿದ್ದು, ಈ ಹಿನ್ನಲೆಯಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.