ಮಂಗಳೂರು, ಸೆ 02 (DaijiworldNews/DB): ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ ಸುಮಾರು 4 ಕೋಟಿ ಬಡವರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಇದರಿಂದ ಬಡವರಿಗಾಗಿ ಖರ್ಚು ಮಾಡಲಾಗುತ್ತಿದ್ದ ಸುಮಾರು 50 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಮಂಗಳೂರಿನಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನಡೆಸಿದ ಬಳಿಕ ಸಿಟಿ ಗೋಲ್ಡ್ಫಿಂಚ್ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ಬಡ ರೋಗಿಗಳು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಆರ್ಥಿಕವಾಗಿ ಹಿಂದುಳಿದವರ ಜೊತೆ ನಮ್ಮ ಸರ್ಕಾರ ನಿಂತಿದೆ. ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಮೀನುಗಾರರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೋಟ್ಯಾಂತರ ಜನರು ದೇಶದ ಅಭಿವೃದ್ಧಿಯ ಲಾಭವನ್ನು ಪಡೆಯಲಾರಂಭಿಸಿರುವುದು ದೇಶದ ದೃಷ್ಟಿಯಿಂದ ಹೆಮ್ಮೆಯ ವಿಚಾರವಾಗಿದೆ. ಅಲ್ಲದೆ ಅವರೆಲ್ಲರೂ ಅಭಿವೃದ್ದಿಯ ಮುಖ್ಯವಾಹಿನಿಯಲ್ಲಿ ಒಳಗೊಳ್ಳುತ್ತಿದ್ದಾರೆ ಎಂದರು.
ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಬಡವರಿಗಾಗಿ 8 ಲಕ್ಷಕ್ಕೂ ಹೆಚ್ಚು ಪಕ್ಕಾ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಸಾವಿರಾರು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಕೋಟ್ಯಾಂತರ ರೂಪಾಯಿ ನೆರವು ನೀಡಲಾಗಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ, ಕೇವಲ 3 ವರ್ಷಗಳಲ್ಲಿ ದೇಶದ 6 ಕೋಟಿಗೂ ಹೆಚ್ಚು ಮನೆಗಳಿಗೆ ಪೈಪ್ಲೈನ್ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ 30 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಪೈಪ್ಲೈನ್ ನೀರು ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರದ ಸಾಧನೆಯ ಹಿನ್ನೋಟವನ್ನು ನೀಡಿದರು.
ಮುದ್ರಾ ಯೋಜನೆ ಮೂಲಕ ಸಣ್ಣ ಉದ್ದಿಮೆದಾರರಿಗೆ ಸಾಲ ವ್ಯವಸ್ಥೆ ಮಾಡಲಾಗುತ್ತಿದ್ದು, ಈವರೆಗೆ 20 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಸಾಲ ನೀಡಲಾಗಿದೆ. ಕೆಲವು ದಿನಗಳ ಹಿಂದೆ ಬಂದಿರುವ ಜಿಡಿಪಿ ಅಂಕಿಅಂಶಗಳು ಕರೋನಾ ಅವಧಿಯಲ್ಲಿ ಭಾರತ ಮಾಡಿದ ನೀತಿಗಳು, ತೆಗೆದುಕೊಂಡ ನಿರ್ಧಾರಗಳು ಎಷ್ಟು ಮುಖ್ಯವೆಂದು ತೋರಿಸುತ್ತಿವೆ.ಕಳೆದ ವರ್ಷ ಹಲವಾರು ಜಾಗತಿಕ ಅಡೆತಡೆಗಳ ಹೊರತಾಗಿಯೂ, ಭಾರತ ಒಟ್ಟು 670 ಬಿಲಿಯನ್ ಅಂದರೆ 50 ಲಕ್ಷ ಕೋಟಿ ರೂ.ಗಳನ್ನು ರಫ್ತು ಮಾಡಿದೆ. ಪ್ರತಿ ಸವಾಲನ್ನು ಮೀರಿ ಭಾರತವು 418 ಶತಕೋಟಿ ರೂ. ಅಂದರೆ 31 ಲಕ್ಷ ಕೋಟಿ ರೂ.ಗಳ ಸರಕು ರಫ್ತಿನ ಹೊಸ ದಾಖಲೆಯನ್ನು ಮಾಡಿದೆ ಎಂದು ಮೋದಿ ತಿಳಿಸಿದರು.