ಮಂಗಳೂರು, ಸೆ 02 (DaijiworldNews/DB): ಕರಾವಳಿ ಅಭಿವೃದ್ದಿಗೆ ಇಂದು ಸುವರ್ಣಾಕ್ಷರದಲ್ಲಿ ಬರೆದ ದಿನವಾಗಿದೆ. ವಿದೇಶಿ ವಿನಿಮಯ, ಆಮದು, ರಫ್ತು ಹೆಚ್ಚಾಗಬೇಕೆಂದರೆ ನಮ್ಮ ಧಾರಣಾ ಸಾಮರ್ಥ್ಯ ಹೆಚ್ಚಾಗಬೇಕೆಂಬ ಎಂಟು ವರ್ಷಗಳ ಯೋಜನೆಗೆ ಪ್ರತಿಫಲವೇ ಇಂದಿನ ಯೋಜನೆಗಳ ಲೋಕಾರ್ಪಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೋಲ್ಡ್ಪಿಂಚ್ ಸಿಟಿ ಮೈದಾನದಲ್ಲಿ ನಡೆಯುತ್ತಿರುವ ಪ್ರಧಾನಿಯವರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಗೆ ಎಲ್ಪಿಜಿ ಟರ್ಮಿನಲ್, ವಿಟಮಿನ್ ಎಡಿಬಲ್ ಆಯಿಲ್ ಸ್ಟೋರೇಜ್ ಸೇರಿದಂತೆ ಹಲವು ಯೋಜನೆಗಳು ಬರುತ್ತಿವೆ. ಆ ಮೂಲಕ ಕರಾವಳಿ ಅಭಿವೃದ್ದಿಯೊಂದಿಗೆ ಸಮಗ್ರ ಕರ್ನಾಟಕದ ಅಭಿವೃದ್ದಿಯಾಗುತ್ತಿದೆ ಎಂದರು.
ಡಬಲ್ ಎಂಜಿನ್ ಸರ್ಕಾರದಿಂದ ಏನೇನು ಅಭಿವೃದ್ದಿಳಾಗಿವೆ ಎಂದು ಕೇಳಿದವರಿಗೆ ಉತ್ತರ ಇಲ್ಲಿದೆ. ಡಬಲ್ ಎಂಜಿನ್ ಸರ್ಕಾರ ಇರುವುದರಿಂದಲೇ ಸಾಗರಮಾಲ ಯೋಜನೆಯಡಿ 18 ಯೋಜನೆ ಮುಗಿಸಿ 14 ಯೋಜನೆಗಳು ಪ್ರಗತಿಯಲ್ಲಿವೆ. ಬಂದರು ಇಲಾಖೆಯಿಂದ ಇದಕ್ಕಾಗಿ 950 ಕೋಟಿ ರೂ. ಸಂಪೂರ್ಣ ಹಣ ಬಿಡುಗಡೆಗೊಂಡಿದೆ ಎಂದು ತಿಳಿಸಿದರು.
ಸಿಆರ್ಝಡ್ ನಿಯಮಗಳಿಂದಾಗಿ ಗೋವಾ, ಕೇರಳಕ್ಕಿದ್ದ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಯ ಅವಕಾಶ ನಮಗಿರಲಿಲ್ಲ. ಆದರೆ 30 ವರ್ಷಗಳ ಹೋರಾಟದ ಫಲವಾಗಿ ಸಿಆರ್ಝಡ್ ವಿಚಾರದಲ್ಲಿ ಕರ್ನಾಟಕದ ಮಾಸ್ಟರ್ ಪ್ಲಾನ್ಗೆ ಅನುಮತಿ ಸಿಕ್ಕಿರುವುದು ಡಬಲ್ ಎಂಜಿನ್ ಸರ್ಕಾರದ ಸಾಧನೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.