ಮಂಗಳೂರು ಫೆ 05(SM): ಮಕ್ಕಳ ರಕ್ಷಣಾ ತಂಡದಿಂದ ಲಾಲ್ಬಾಗ್ ಹಾಗೂ ಪದುವಾ ಬಳಿ ಭಿಕ್ಷಾಟನೆ ನಿರತ ಬೀಡುಬಿಟ್ಟಿರುವ ಕುಟುಂಬವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿ ರಕ್ಷಣೆ ನೀಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಗಳೂರು, ಚೈಲ್ಡ್ಲೈನ್-1098 ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ಪೊಲೀಸ್ ಇಲಾಖೆ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ಆರೋಗ್ಯ ಇಲಾಖೆ ಮಂಗಳೂರು, ಮೇಲ್ವಿಚಾರಕರು(ಶಿಶು ಅಭಿವೃದ್ಧಿ ಯೋಜನೆ) ಮಂಗಳೂರು ನಗರ, ಬರ್ಕೆ ಪೋಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಕಾರ್ಮಿಕ ಇಲಾಖೆ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಆಯೋಜಿಸಿರುವ ಮಕ್ಕಳ ರಕ್ಷಣಾ ತಂಡದಿಂದ ರಕ್ಷಣೆ ನೀಡಲಾಯಿತು.
ರಾಜಸ್ಥಾನ ಮೂಲದ ಕುಟುಂಬವೊಂದು ಲಾಲ್ಬಾಗ್ ಜಂಕ್ಷನ್ ಬಳಿ ಮಕ್ಕಳ ಕೈಯಲ್ಲಿ ಬಲೂನು ಹಿಡಿದುಕೊಂಡು ಮಾರಾಟ ಮಾಡಿಸುತ್ತಿರುವ ಮಾಹಿತಿ ಚೈಲ್ಡ್ಲೈನ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಕ್ಕಳ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದೆ.
ಲಾಲ್ಬಾಗ್ ಬಳಿ ವಾಸವಿದ್ದ ರಾಜಸ್ಥಾನ ಮೂಲದ ಕುಟುಂಬವನ್ನು ಇಲಾಖೆ ಅಧಿಕಾರಿಗಳು ರಕ್ಷಿಸಿದರು. ಇವರ ಜೊತೆ ೧೦ ಮಕ್ಕಳಿದ್ದು ಸೂಕ್ತ ಶಿಕ್ಷಣದ ಅಗತ್ಯವಿರುವುದರಿಂದ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು. ಸಮಿತಿಯ ಆದೇಶದ ಮೇರೆಗೆ ಮೂಲ ದಾಖಲೆಗಳನ್ನು ಸಂಗ್ರಹಿಸಿ ಹೆತ್ತವರ ಜೊತೆ ಮಕ್ಕಳನ್ನು ರಾಜಸ್ಥಾನಕ್ಕೆ ಕಳುಹಿಸಿಕೊಡಲಾಯಿತು.