ಮಂಗಳೂರು, ಸೆ 02 (DaijiworldNews/DB): ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಮ್ತು ಸುರಕ್ಷತೆಯ ನಿಟ್ಟಿನಲ್ಲಿ ನಗರಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ಇದರಿಂದ ಪ್ರಯಾಣಿಕರು, ಚಾಲಕರು ಪರದಾಡಿದರು.
ನಿತ್ಯ ಸಂಚಾರದ ಮಾರ್ಗಗಳನ್ನು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಾರ್ಪಾಡು ಗೊಳಿಸಲಾಗಿದೆ. ಬೈಕಂಪಾಡಿಯಲ್ಲಿ ವಾಹನಗಳಿಗೆ ಪೊಲೀಸರು ತಡೆ ಹಾಕಿರುವುದರಿಂದ ಪೊಲೀಸರು ಮತ್ತು ವಾಹನ ಚಾಲಕರ ನಡುವೆ ಹೆದ್ದಾರಿಯಲ್ಲೇ ಮಾತಿನ ಚಕಮಕಿ ನಡೆಯಿತು. ಇಲ್ಲಿ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ಪ್ರಧಾನಿಯವರು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಪಿಟಿ ಹೆದ್ದಾರಿ ಮೂಲಕ ಗೋಲ್ಡ್ಪಿಂಚ್ ಮೈದಾನಕ್ಕೆ ತೆರಳುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಂಜಾರು-ಕೆಪಿಟಿ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಜಪೆ-ಕೆಂಜಾರು-ಮರವೂರು-ಮರಕಡ-ಕಾವೂರು-ಬೋಂದೆಲ್- ಪದವಿನಂಗಡಿ-ಯೆಯ್ನಾಡಿ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್ನಿಂದ ಕೊಟ್ಟಾರ ಚೌಕಿ-ಕೂಳೂರು-ಎನ್ಎಂಪಿಎವರೆಗೆ ಹಾದು ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ಈಗಾಗಲೇ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಅಲ್ಲದೆ ಈ ರಸ್ತೆಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕಾರ್ಯಕ್ರಮ ಸಂಬಂಧಿಸಿದವರ ಹಾಗೂ ತುರ್ತು ಸೇವೆ ವಾಹನ ಹೊರತುಪಡಿಸಿ ಇತರ ಎಲ್ಲ ಸರಕು ವಾಹನ, ಘನ ವಾಹನ, ಪ್ರವಾಸಿ ವಾಹನ ಹಾಗೂ ಇತರ ಸಾರ್ವಜನಿಕ ವಾಹನಗಳ ಸಂಚಾರವನ್ನು ಕೂಡಾ ನಿಷೇಧ ಮಾಡಲಾಗಿದೆ. ಈಗಾಗಲೇ ನಗರದಲ್ಲಿ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿರುವುದರಿಂದ ಶಾಲಾ ಮಕ್ಕಳ ಮೇಲೆ ಈ ಸಂಚಾರ ನಿಷೇಧ ಅಷ್ಟೇನು ಪರಿಣಾಮ ಬೀರಿಲ್ಲ. ಆದರೆ ದಿನನಿತ್ಯದ ಕೆಲಸಕ್ಕೆ ತೆರಳುವ ಉದ್ಯೋಗಿಗಳು, ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಬದಲಿ ರಸ್ತೆಗಳನ್ನು ಗೊತ್ತುಪಡಿಸಲಾಗಿದ್ದರೂ, ಅದು ಯಾವುದು, ಹೇಗೆ ಸಂಚರಿಸಬೇಕೆಂದು ತಿಳಿಯದೇ ಮತ್ತು ಬಹಳ ದೂರಕ್ಕೆ ಸುತ್ತು ಬಳಸಿ ಸಾಗಬೇಕಾದ ಕಾರಣದಿಂದ ಹಲವರು ಪ್ರಯಾಸಪಟ್ಟ ಪ್ರಸಂಗ ನಡೆಯಿತು.
ಬೆಳಗ್ಗೆ 10ರಿಂದ ಪ್ರಧಾನಿಯವರು ವಿಮಾನ ನಿಲ್ದಾಣದಿಂದ ನಿರ್ಗಮಿಸುವವರೆಗೆ ನಂತೂರು, ಬಿಕರ್ನಕಟ್ಟೆ- ಕೈಕಂಬ, ಮಂಗಳ ಜ್ಯೋತಿ, ವಾಮಂಜೂರು, ಪೊರ್ಕೊಡಿ, ಮೂಲ್ಕಿ, ಹಳೆಯಂಗಡಿ, ಜೋಕಟ್ಟೆ ಕ್ರಾಸ್, ಲೇಡಿಹಿಲ್ ಸೇರಿದಂತೆ 9 ಜಂಕ್ಷನ್ಗಳಲ್ಲಿ ಸಂಚಾರ ಬದಲಾವಣೆಗೆ ಪರ್ಯಾಯವಾಗಿ ರಸ್ತೆ ಗುರುತಿಸಲಾಗಿದೆ.
ಬಸ್ ಇಲ್ಲದೆ ಪರದಾಟ
ಮೋದಿ ಸಾರ್ವಜನಿಕರನ್ನುದ್ದೇಶಿಸಿ ನಗರದ ಗೋಲ್ಡ್ಫಿಂಚ್ ಮೈದಾನದಲ್ಲಿ ಮಾತನಾಡಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಯೋಜನೆಗಳ ಫಲಾನುಭವಿಗಳನ್ನು ಕರೆ ತರಲು 2 ಸಾವಿರಕ್ಕೂ ಅಧಿಕ ಬಸ್ಗಳ ವ್ಯವಸ್ಥೆಯನ್ನು ಜಿಲ್ಲೆಯಾದ್ಯಂತ ಮಾಡಲಾಗಿದೆ. ಹೀಗಾಗಿ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ಗಳು ಕಾರ್ಯಕ್ರಮಕ್ಕೆ ನಿಯೋಜನೆಗೊಂಡಿರುವ ಕಾರಣ ನಿತ್ಯ ಪ್ರಯಾಣಿಕರು ಮತ್ತು ಅಗತ್ಯವಾಗಿ ಹೋಗಬೇಕಾದ ಇತರ ಪ್ರಯಾಣಿಕರು ಪರದಾಟ ನಡೆಸಿದರು. ಜಿಲ್ಲೆಯ ವಿವಿಧೆಡೆ ಬಸ್ಗಾಗಿ ಜನ ಕಾದು ಸುಸ್ತಾದ ಪ್ರಸಂಗವೂ ನಡೆಯಿತು. ಅಲ್ಲದೆ ಮಾರ್ಗ ಬದಲಾವಣೆ ಕಾರಣದಿಂದಾಗಿ ಕೆಲವು ಬಸ್ಗಳು ಕಾರ್ಯಾಚರಣೆಯನ್ನೂ ನಿಲ್ಲಿಸಿರುವ ಕಾರಣ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು. ಕೆಲವರು ಕಿಲೋಮೀಟರ್ ಗಟ್ಟಲೆ ನಡೆದು ಸಾಗಿದ ಪ್ರಸಂಗವೂ ನಡೆಯಿತು.
ಅಲ್ಲಲ್ಲಿ ವಾಹನ ತಪಾಸಣೆ
ಇನ್ನೊಂದೆಡೆ 3,800 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸಕ್ಕೆ ಮಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರ ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪೊಲೀಸರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತಿ ವಾಹನಗಳನ್ನು ತಪಾಸಣೆ ನಡೆಸಿಯೇ ಬಿಡುತ್ತಿದ್ದಾರೆ. ಮುಖ್ಯವಾಗಿ ಕೆಪಿಟಿ, ಕಾವೂರು, ಕೊಟ್ಟಾರಚೌಕಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಕೈಗೊಳ್ಳಲಾಗಿದೆ. ವಾಹನ ಪಾಸ್ ಇಲ್ಲದೆ ಕೊಟ್ಟಾರ ಚೌಕಿಯಿಂದಾಚೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಪೊಲೀಸರು ಅನುಮತಿ ನೀಡುತ್ತಿಲ್ಲ.