ಮಂಗಳೂರು, ಸೆ 02 (DaijiworldNews/DB): ಪ್ರಧಾನಿ ಮೋದಿಯವರು ಇಂದು 3800 ಕೋಟಿ ರೂ. ಮೊತ್ತದ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸುವ ಮೂಲಕ ಕರಾವಳಿ ಭಾಗದ ಅಭಿವೃದ್ದಿಗೆ ದೊಡ್ಡ ಶಕ್ತಿ ತುಂಬಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ. ಇಡೀ ಕರಾವಳಿಯ ಅಭಿವೃದ್ದಿಗೆ ಪೂರಕವಾಗಿರುವ ಯೋಜನೆಗಳಿಗೆ ಶಿಲಾನ್ಯಾಸ, ಲೋಕಾರ್ಪಣೆ ಮಾಡಲಿದ್ದಾರೆ. ಇಲ್ಲಿನ ಆರ್ಥಿಕ ಚಟುವಟಿಕೆ ಹೆಚ್ಚಳಕ್ಕೆ, ಉದ್ಯೋಗ ಕಂಡುಕೊಳ್ಳಲು ಬೇಕಾದ ಪೂರಕ ಯೋಜನೆಗಳನ್ನು ನೀಡುವ ಮೂಲಕ ಈ ಭಾಗದ ಅಭಿವೃದ್ದಿಗೆ ಶಕ್ತಿ ತುಂಬಲಿದ್ದಾರೆ ಎಂದರು.
ಕರ್ನಾಟಕಕ್ಕೆ 100 ಆಳ ಸಮುದ್ರ ಮೀನುಗಾರಿಕೆ ದೋಣಿ ಮಂಜೂರಾತಿಯನ್ನು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಾಡಲಿದ್ದಾರೆ. ಮೀನುಗಾರರಿಗೆ ಬ್ಯಾಂಕ್ ಸಾಲ ಸುಲಭವಾಗಿ ದೊರಕುವ ನಿಟ್ಟಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ ಮಾಡಿದ್ದಾರೆ. ಇನ್ನೂ ಹಲವು ಯೋಜನೆಗಳು ಸೇರಿವೆ ಎಂದು ತಿಳಿಸಿದರು.
ಮುರುಘಾ ಮಠದ ಸ್ವಾಮೀಜಿ ಬಂಧನ ವಿಳಂಬವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಎಲ್ಲಾ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತದೆ. ಈ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ. ತನಿಖೆಗೆ ಮುಕ್ತ ಅವಕಾಶ ನೀಡಲಾಗಿದ್ದು, ಅವರು ಅದನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಜನಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಜನೋತ್ಸವ ಕಾರ್ಯಕ್ರಮ ಸೆ. 8ರಂದು ದೊಡ್ಡಬಳ್ಳಪುರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಒಂದೇ ಕಾರಿನಲ್ಲಿ ಸಿಎಂ, ಮಾಜಿ ಸಿಎಂ
ಸಿಎಂ ಬೊಮ್ಮಾಯಿ ಮಂಗಳೂರಿಗೆ ಆಗಮಿಸುವ ಮುನ್ನ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಗಳೂರಿನಲ್ಲಿ ಸ್ವಾಗತಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕಾರಿನಲ್ಲೇ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ್ದು ವಿಶೇಷವಾಗಿತ್ತು. ಮಾಜಿ ಸಿಎಂ ಯಡಿಯೂರಪ್ಪ ಅವರ ಕಾರಿನಲ್ಲಿ ಸಿಎಂ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ತೆರಳಿದರು. ಯಡಿಯೂರಪ್ಪ ಅವರ ಕಾವೇರಿ ನಿವಾಸದಿಂದಲೇ ಮೂವರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಮಂಗಳೂರಿನಲ್ಲಿ ನಡೆಯುವ ಮೋದಿ ಕಾರ್ಯಕ್ರಮದಲ್ಲಿ ಮೂವರು ಕೂಡಾ ಭಾಗಿಯಾಗಲಿದ್ದಾರೆ.