ಬ್ರಹ್ಮಾವರ, ಸೆ 02 (DaijiworldNews/MS): ಇಲ್ಲಿನ ಹೇರೂರು ಮೆಸ್ಕಾಂ ಕ್ವಾಟ್ರಸ್ ಸಮೀಪ ವಾಸವಿದ್ದ ಉಷಾ(31) ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿಯ ಕಿರುಕುಳದಿಂದ ಬೇಸತ್ತು ತನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ಆಜ್ರಿ ಗ್ರಾಮದ ವಸಂತ ಕುಲಾಲ್ ಎಂಬವರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಷಾರನ್ನು 11ವರ್ಷಗಳ ಹಿಂದೆ ಚಂದ್ರಹಾಂಡ ಎಂಬವರೊಂದಿಗೆ ಮದುವೆಯಾಗಿದ್ದು, ಒಂದು ಗಂಡು ಮಗುವಿದೆ. ಮದುವೆಯ ಬಳಿಕ ಬೆಂಗಳೂರಿನಲ್ಲಿದ್ದ ದಂಪತಿ, ಎಂಟು ತಿಂಗಳಿನಿಂದ ಹೇರೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ. ಇಬ್ಬರೂ ಪೇತ್ರಿಯ ಗಾರ್ಮಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
30ರಂದು ಸಂಜೆ ಸಹ ಕಲಹವಾಗಿದ್ದು ಬಳಿಕ ಉಷಾ ಅವರು ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. 31ರಂದು ಬೆಳಗ್ಗೆ ರೂಮಿನ ಕಿಟಿಕಿ ಮೂಲಕ ನೋಡಿದಾಗ ಉಷಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಉಷಾರ ಸಾವಿಗೆ ಆಕೆಯ ಗಂಡನ ಕಿರುಕುಳ ಹಾಗೂ ದುಷ್ಪ್ರೇರಣೆ ಕಾರಣ ಎಂದು ಉಷಾರ ಸಹೋದರ ವಸಂತ ಕುಲಾಲ್ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821