ಬೆಳ್ತಂಗಡಿ, ಫೆ 05(SM): ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾಡಿರುವ ಸಾಧನೆಯನ್ನು ನೋಡಬೇಕಾದರೆ ಸಂಸದರ ಆದರ್ಶ ಗ್ರಾಮವಾಗಿರುವ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಪರಿಸ್ಥಿತಿಯನ್ನು ಬಂದು ನೋಡಿದರೆ ಸಾಕು. ಹಿಂದೆ ಹೇಗಿತ್ತೋ ಇಂದೂ ಕೂಡ ಹಾಗೆಯೇ ಇರುವ ಆದರ್ಶ ಗ್ರಾಮದ ಸ್ಥಿತಿ ಇದಾಗಿದೆ. ಅಭಿವೃದ್ದಿಗೆ ಸಂಬಂಧಿಸಿದಂತೆ ಉಳಿದ ವಿಚಾರಗಳ ಕುರಿತು ಮಾತನಾಡುವ ಅಗತ್ಯವಿಲ್ಲ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ವೆಂಕಪ್ಪ ಗೌಡ ವ್ಯಂಗ್ಯವಾಡಿದ್ದಾರೆ.
ವೆಂಕಪ್ಪ ಗೌಡ ಸಂಸದ ನಳಿನ್
ಅವರು ಮಂಗಳವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಸದರ ಆದರ್ಶ ಗ್ರಾಮ ಬಳ್ಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೊದಲಿದ್ದ ಮಣ್ಣಿನ ರಸ್ತೆಯೇ ಈಗಲೂ ಇದೆ. ಮೂಲಭೂತ ಸೌಕರ್ಯಗಳು ಇನ್ನೂ ದೊರಕಿಲ್ಲ. ಬೇರೆ ಉದಾಹರಣೆಯನ್ನು ನೀಡಬೇಕಾಗಿಲ್ಲ ಎಂದರು. ಇನ್ನು ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ದತೆಗಳನ್ನು ಆರಂಭಿಸಿದೆ. ಪಕ್ಷದಲ್ಲಿ ಹಲವರು ಟಿಕೇಟು ಆಕಾಂಕ್ಷಿಗಳಿದ್ದಾರೆ. ರಮಾನಾಥ ರೈ, ವಿನಯಕುಮಾರ್ ಸೊರಕೆ, ಬಿ.ಕೆ.ಹರಿಪ್ರಸಾದ್, ಎಂ.ಎನ್.ರಾಜೇಂದ್ರಕುಮಾರ್, ಕಣಚೂರು ಮೋನು ಮೊದಲಾದ ಹಿರಿಯರು ಇದ್ದಾರೆ. ಆದರೆ ಯಾರು ಕಣಕ್ಕೆ ಇಳಿಯಬೇಕು ಎಂಬ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ರೈತರಿಗೆ ವರ್ಷಕ್ಕೆ ಕೇವಲ ಆರು ಸಾವಿರ ರೂ. ನೀಡುವುದಾಗಿ ಘೋಷಿಸಿ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ವಂಚಿಸುತ್ತಿದ್ದಾರೆ. ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು 76 ಸಾವಿರ ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದ್ದರು. ರಾಜ್ಯದಲ್ಲಿಯೂ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಾಗೂ ಈಗಿನ ಸಮ್ಮಿಶ್ರ ಸರಕಾರ ಕೂಡ ರೈತರ ಸಾಲಮನ್ನಾ ಮಾಡಿದೆ. ಕೊಳೆರೋಗಕ್ಕೆ ಈಡಾಗಿದ್ದ ರೈತರ ನೆರವಿಗೆ ಸರಕಾರ ಬಂದಿದೆ.
ಮೋದಿ ಸರಕಾರ ರೈತರಿಗೆ ಅನ್ನಕೊಡುವ ಬದಲು ಚಿಕ್ಕ ಮಕ್ಕಳಿಗೆ ಪೆಪ್ಪರ್ ಮಿಠಾಯಿಕೊಟ್ಟು ವಂಚಿಸುವ ಕೆಲಸ ಮಾಡಿದೆ ಎಂದು ವ್ಯಂಗ್ಯವಾಡಿದರು.