ಕಾರ್ಕಳ, ಸೆ 01 (DaijiworldNews/DB): ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಅಂಗೀಕರಿಸುವ ಮೂಲಕ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.
ಗುರುವಾರ ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ. ಅವರ ಅಧ್ಯಕ್ಷತೆಯಲ್ಲಿ ಹಾಜರಿದ್ದ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿಯನ್ನು ಮಂಡಿಸಿದರು.
ಮಾಳ ಗ್ರಾಮ ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿದ್ದು, ಒಟ್ಟು 15 ಸದಸ್ಯ ಬಲದ ಪೈಕಿ 14 ಸದಸ್ಯರು ಅವಿಶ್ವಾಸ ನಿರ್ಣಯದ ಮತದಾನದಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 10 ಸದಸ್ಯರು ಅವಿಶ್ವಾಸ ಗೊತ್ತುವಳಿ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ 4 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಿದರು. ಅಂತಿಮವಾಗಿ ಅವಿಶ್ವಾಸ ಮೂರನೆಯ ಎರಡು ಬಹುಮತದೊಂದಿಗೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಮಲ್ಲಿಕಾ ಶೆಟ್ಟಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ರಾಜು ಕೆ. ಘೋಷಿಸಿದರು.
ಮಲ್ಲಿಕಾ ಶೆಟ್ಟಿ ಅವರು ಪಂಚಾಯತ್ ಸದಸ್ಯರ ವಿಶ್ವಾಸ ಪಡೆಯದೇ ಏಕ ಪಕ್ಷಿಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿರೋಧಿ ಬಣದ ಸದಸ್ಯರು ಬಿಜೆಪಿ ನಾಯಕರಲ್ಲಿ ದೂರು ನೀಡಿದ್ದರು. ಆಂತರಿಕ ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯ ನಾಯಕರು ಪಕ್ಷದ ಕಾರ್ಯಕರ್ತರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆದುಕೊಳ್ಳುವಂತೆ ಅಧ್ಯಕ್ಷರಿಗೆ ಸೂಚಿಸಿದ್ದರು. ಆದರೆ ಪಕ್ಷದ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಅವರು ಒಪ್ಪದ ಹಿನ್ನೆಲೆಯಲ್ಲಿ ಅವರನ್ನು ವಜಾ ಗೊಳಿಸಲಾಗಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ
.
ಭ್ರಷ್ಟಾಚಾರಕ್ಕೆ ಅವಕಾಶ ನೀಡದ್ದಕ್ಕೆ ವಜಾ- ಮಲ್ಲಿಕಾ ಶೆಟ್ಟಿ
ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತೆ. ನನ್ನ ಅಧ್ಯಕ್ಷ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದೇನೆ. ಪಂಚಾಯತ್ನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎನ್ನುವ ಕಾರಣಕ್ಕೆ ನನ್ನ ವಿರುದ್ಧ ಪಿತೂರಿ ಮಾಡಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಈ ಕ್ರಮದ ವಿರುದ್ಧ ಹೈಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಪದಚ್ಯುತ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಹೇಳಿದ್ದಾರೆ. ಈ ಹಿಂದೆ ಪಂಚಾಯತ್ನ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸುವ ನೌಕರರೊಬ್ಬರು ನನ್ನ ಸಹಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಅವರ ನೇಮಕಾತಿಗೆ ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕೆ ಕೆಲವು ಸದಸ್ಯರು ನನ್ನ ವಿರುದ್ಧ ಬಿಜೆಪಿ ವರಿಷ್ಟರಿಗೆ ದೂರು ನೀಡಿದ್ದರು. ಪ್ರಾಮಾಣಿಕ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಇಲ್ಲ. ನನ್ನಂತಹ ಸಾಮಾನ್ಯ ಮಹಿಳೆಗೆ ಅನ್ಯಾಯವಾದಂತೆ ಇತರರಿಗೆ ಆಗಬಾರದು ಎನ್ನುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಾಗೂ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಹೊಸ್ತಿಲಿನಲ್ಲೇ ಬಿಜೆಪಿಯಲ್ಲಿ ಭಿನ್ನಮತದ ಬೇಗುದಿ ಸ್ಪೋಟಗೊಂಡಿದ್ದು ಬಿಜೆಪಿ ಹೇಗೆ ಎದುರಿಸಲಿದೆ ಎನ್ನುವುದು ಇದೀಗ ಅತ್ಯಂತ ಸವಾಲಿನ ಸಂಗತಿಯಾಗಿದೆ.