ಮಂಗಳೂರು, ಸೆ 01 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿ ಹಾಗೂ ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಮೈದಾನಕ್ಕೆ ಆಗಮಿಸಿ ಸಿದ್ದತೆಗಳನ್ನು ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಮಧ್ಯಾಹ್ನ12.30ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಅವರ ಆಗಮನದಿಂದ ನಿರ್ಗಮನದವರೆಗೆ ಬೇಕಾಗುವ ಎಲ್ಲಾ ಭದ್ರತೆಗಳನ್ನು ಕಲ್ಪಿಸಲು ಮಂಗಳೂರು ಪೊಲೀಸರು ಈಗಾಗಲೇ ವ್ಯವಸ್ಥೆ ಮಾಡಿದ್ದಾರೆ. ಐಜಿಪಿಯವರು ಬರಲಿದ್ದಾರೆ, ಎಡಿಜಿಪಿಯವರು ಈಗಾಗಲೇ ಬಂದಿದ್ದಾರೆ. ಆಯುಕ್ತರು ಸೇರಿದಂತೆ 100 ಜನ ಅಧಿಕಾರಿಗಳು, 2000 ಸಿವಿಕ್ ಪೊಲೀಸರು, ಕೆಎಸ್ಆರ್ಪಿ, ಎಎನ್ಎಫ್, ಸಿಎಆರ್, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಡಿಎಆರ್, ಆರ್ಎಎಫ್, ಐಎಸ್ಪಿ ಸೇರಿದಂತೆ ಒಟ್ಟು 3000 ಮಂದಿ ಅಧಿಕಾರಿ, ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಭದ್ರತೆಯಲ್ಲಿ ಯಾವ ಲೋಪ ಆಗದಂತೆ ಮುತುವರ್ಜಿ ವಹಿಸಲಾಗಿದೆ. ಎಸ್ಪಿ, ಉಸ್ತುವಾರಿ ಸಚಿವ ವಿ. ಸುನಿಲ್ಕುಮಾರ್, ಸಂಸದ ನಳಿನ್ಕುಮಾರ್, ಶಾಸಕರುಗಳ ವಿಶೇಷ ಮುತುವರ್ಜಿಯಲ್ಲಿ ಸಿದ್ದತೆಗಳಾಗಿವೆ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ಕುಮಾರ್ ಮಾತನಾಡಿ, ಸುಮಾರು 3800 ಕೋಟಿ ರೂ.ಗಳ ಯೋಜನೆಗಳಿಗೆ ಪ್ರಧಾನಿಯವರು ಚಾಲನೆ ನೀಡಲಿದ್ದಾರೆ. ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ 1 ಲಕ್ಷಕ್ಕೂ ಹೆಚ್ಚು ಜನ ಸಾರ್ವಜನಿಕರು ಭಾಗವಹಿಸಲಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ರಾಜ್ಯ ಮತ್ತು ಕೇಂದ್ರದ ಯೋಜನೆಗಳ ಫಲಾನುಭವಿಗಳು ಆಗಮಿಸಲಿದ್ದಾರೆ. ಗ್ರಾಮ ಮಟ್ಟದಲ್ಲಿಯೂ ಫಲಾನುಭವಿಗಳನ್ನು ಸಂಪರ್ಕಿಸಲಾಗಿದ್ದು, ಅವರ ಆಗಮನಕ್ಕಾಗಿ 2 ಸಾವಿರ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಧಾನಿಯವರು ಮಧ್ಯಾಹ್ನ 1.30ಕ್ಕೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಫಲಾನುಭವಿಗಳು 11.30-12ರೊಳಗೆ ಮೈದಾನ ತಲುಪಬೇಕು ಎಂದವರು ಇದೇ ವೇಳೆ ಮನವಿ ಮಾಡಿದರು.