ಉಡುಪಿ, ಸೆ 01 (DaijiworldNews/DB): ಮಾದಕ ದ್ರವ್ಯ ವ್ಯವಸನದ ವಿರುದ್ದ ಕಾರ್ಯಾಚರಣೆ ನಡೆಸುತ್ತಿರುವ ಉಡುಪಿ ಜಿಲ್ಲಾ ಪೊಲೀಸರು ಕಳೆದ 15 ದಿನಗಳಲ್ಲಿ 54ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್ ಮಚ್ಚೀಂದ್ರ ಹಾಕೆ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಂದೇ ಮಾದಕ ದ್ರವ್ಯಗಳ ವಿರುದ್ದ ಹೋರಾಡುವುದಾಗಿ ಹೇಳಿದ್ದರು. ಡ್ರಗ್ ಮಾಫಿಯಾವನ್ನು ಕಿತ್ತೊಗೆಯುವಲ್ಲಿ ರಾಜ್ಯ ಮತ್ತು ಜಿಲ್ಲಾ ಪೊಲೀಸರು ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಡ್ರಗ್ ಮಾಫಿಯಾದಿಂದ ಸಿಗುವ ಹಣವನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ, ಯುವಕರ ಜೀವನ ಇದರಿಂದ ಹಾಳಾಗುತ್ತಿದೆ ಎಂದಿದ್ದರು.
ಬಳಿಕ ಜಿಲ್ಲಾ ಪೊಲೀಸರಿಗೆ ಮಾದಕ ದ್ರವ್ಯದ ವಿರುದ್ದ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ಜಿಲ್ಲಾ ಪೊಲೀಸರು ಕಾರ್ಯೋನ್ಮುಖರಾಗಿದ್ದು, ಗಾಂಜಾ ಸೇವನೆ ಮಾಡುವವರ ವಿರುದ್ದ ಪ್ರತಿದಿನ ಪ್ರಕರಣ ದಾಖಲಿಸಲಾಗುತ್ತಿದೆ.15 ದಿನಗಳಲ್ಲಿ 54 ಪ್ರಕರಣಗಳನ್ನುಉಡುಪಿ ಪೊಲೀಸರು ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲು ಮಾಡಿದ್ದಾರೆ.
ದಾಯ್ಜಿವರ್ಲ್ದ್ ಜೊತೆ ಈ ಬಗ್ಗೆ ಮಾತನಾಡಿದ ಎಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಮಾದಕ ದ್ರವ್ಯ ಸೇವನೆ ಸಂಬಂಧಿಸಿ ಕಳೆದ 15 ದಿನಗಳಲ್ಲಿ 54 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ತೊಡಗಿಸಿಕೊಂಡವರೆಲ್ಲ 20-30 ವರ್ಷ ವಯಸ್ಸಿನ ಒಳಗಿನವರಾಗಿದ್ದಾರೆ. ಡ್ರಗ್ಸ್ ವಿರುದ್ದದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಕುಂದಾಪುರ ಉಪ ವಿಭಾಗದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಗಂಗೊಳ್ಳಿ,, ಬೈಂದೂರು ಮತ್ತು ಇತರ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ಮಾದಕ ದ್ರವ್ಯ ಸಾಗಾಟ ಜಾಲವನ್ನು ಪತ್ತೆ ಹಚ್ಚಬೇಕಾದ ಅಗತ್ಯವೂ ಇದೆ. ಮಾದಕ ದ್ರವ್ಯ ಸೇವನೆ ಪ್ರಕರಣಗಳಲ್ಲಿ ಕೋರ್ಟ್ನಲ್ಲಿ ದಂಡ ಪಾವತಿಸಿ ಆತ ಬಿಡುಗಡೆಗೊಳ್ಳುತ್ತಾನೆ. ಸಾಗಾಟ ಜಾಲ ಪತ್ತೆ ಹಚ್ಚಿ ಅದರಲ್ಲಿ ತೊಡಗಿಸಿಕೊಂಡವರನ್ನು ಬಂಧಿಸುವಲ್ಲಿ ಪೊಲೀಸರು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.